ಚಿಕ್ಕನಾಳು ಕನ್ನಡ-ಉರ್ದು ಸರ್ಕಾರಿ ಶಾಲೆ ಮುಚ್ಚುವ ಯತ್ನಕ್ಕೆ ತೀವ್ರ ವಿರೋಧ

KannadaprabhaNewsNetwork |  
Published : Feb 25, 2026, 01:45 AM IST
24ಎಚ್ಎಸ್ಎನ್13 :  | Kannada Prabha

ಸಾರಾಂಶ

ಕಳೆದ ಎಂಟು ವರ್ಷಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದರೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು. ಮೂರುವರೆ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ೨೧,೦೦೦ಕ್ಕಿಂತ ಹೆಚ್ಚು ತರಗತಿ ಕೊಠಡಿಗಳು ದುರಸ್ತಿಯಾಗಿಲ್ಲ. ಮೊದಲು ಈ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಚಿಕ್ಕನಾಳು ಪ್ರದೇಶದಲ್ಲಿರುವ ಕನ್ನಡ ಹಾಗೂ ಉರ್ದು ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ವಿಲೀನಗೊಳಿಸಿ ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಎಐಡಿಎಸ್ ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು- ಪೋಷಕರು ಮಂಗಳವಾರ ಸ್ಥಳದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ ಒ ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ೪೦,೦೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಕ್ರಮ ಜಾರಿಯಲ್ಲಿದೆ. ಚಿಕ್ಕನಾಳು ಪ್ರದೇಶದ ಈ ಎರಡು ಶಾಲೆಗಳಲ್ಲಿ ೩೦ಕ್ಕಿಂತ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಬಡ ಮತ್ತು ಕಾರ್ಮಿಕ ವರ್ಗದ ಮಕ್ಕಳಿಗೆ ಸಮೀಪದಲ್ಲೇ ಶಿಕ್ಷಣ ಲಭ್ಯವಾಗುತ್ತಿರುವ ಈ ಶಾಲೆಗಳನ್ನು ಮುಚ್ಚುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಶಾಲೆ ಮುಚ್ಚಿ, ಮಕ್ಕಳನ್ನು ನಗರದ ಚಿಪ್ಪಿನಕಟ್ಟೆಯಲ್ಲಿರುವ ಪ್ರೌಢಶಾಲೆಗೆ ವರ್ಗಾಯಿಸುವಂತೆ ಆದೇಶಿಸಿರುವುದನ್ನು ಖಂಡಿಸಿದ ಅವರು, ಇದು ಬಡವರ ಮಕ್ಕಳಿಂದ ಶಿಕ್ಷಣ ಕಸಿಯುವ ವ್ಯವಸ್ಥಿತ ಪ್ರಯತ್ನ. ಶಿಕ್ಷಣ ಸಚಿವರು ಸದನದಲ್ಲಿ ‘ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ’ ಎಂದು ಹೇಳಿ, ಹಿಂಬಾಗಿಲಿನಿಂದ ಆದೇಶ ಹೊರಡಿಸುವುದು ದ್ವಂದ್ವ ನೀತಿ ಎಂದು ಟೀಕಿಸಿದರು.

ಕಳೆದ ಎಂಟು ವರ್ಷಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದರೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು. ಮೂರುವರೆ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ೨೧,೦೦೦ಕ್ಕಿಂತ ಹೆಚ್ಚು ತರಗತಿ ಕೊಠಡಿಗಳು ದುರಸ್ತಿಯಾಗಿಲ್ಲ. ಮೊದಲು ಈ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಪೋಷಕರಾದ ಸಲ್ಮಾ ಬಾನು ಮಾತನಾಡಿ, ಚಿಕ್ಕನಾಳು ಪ್ರದೇಶದಲ್ಲಿ ವಾಸಿಸುವವರು ಬಹುತೇಕ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು. ನಮ್ಮ ಮಕ್ಕಳಿಗೆ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಯೇ ಆಶ್ರಯ. ದೂರದ ಶಾಲೆಗೆ ಕಳುಹಿಸುವುದು ಸುರಕ್ಷತೆ ಮತ್ತು ಆರ್ಥಿಕ ಹೊರೆ ಎರಡನ್ನೂ ಹೆಚ್ಚಿಸುತ್ತದೆ. ನಾವು ಸಹ ಇದೇ ಶಾಲೆಯಲ್ಲಿ ಓದಿ ಬೆಳೆದವರು. ಯಾವುದೇ ಕಾರಣಕ್ಕೂ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ದೃಢವಾಗಿ ಹೇಳಿದರು. ಇದೇ ವೇಳೆ, ಚಿಕ್ಕನಾಳು ಕನ್ನಡ ಹಾಗೂ ಉರ್ದು ಸರ್ಕಾರಿ ಶಾಲೆಗಳನ್ನು ಉಳಿಸಲು ಸ್ಥಳೀಯರನ್ನೊಳಗೊಂಡ ಏರಿಯಾ ಸಮಿತಿ ರಚಿಸಲಾಯಿತು. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಚೈತ್ರ, ಉಪಾಧ್ಯಕ್ಷ ಅಭಿಷೇಕ್, ಪೋಷಕರಾದ ಆಯಿಷಾ, ಸಲ್ಮಾ ಬಾನು, ಅಮೀರ ಬಾನು, ಫಾತಿಮಾ ಜಹಾರ, ಸಮೀನಾ, ಜಮೀರ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚಿತ ಆರೋಗ್ಯ ಶಿಬಿರ: 300 ಶಿಬಿರಾರ್ಥಿಗಳಿಗೆ ತಪಾಸಣೆ
ಸವಿತಾ ಸಮಾಜದವರು ವೈಯಕ್ತಿಕ ಆರೋಗ್ಯದತ್ತ ಗಮನಹರಿಸಿ: ಡಾ. ಪುಷ್ಪಲತಾ