ಕನ್ನಡಪ್ರಭ ವಾರ್ತೆ ಯಮಕನಮರಡಿ
ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಪೂರೈಕೆಗೆ ಘಟಪ್ರಭಾ ನದಿ ಹಿಡಕಲ್ ಜಲಾಶಯ ಮುಂದೆ ಜಾಕವೆಲ್ ಕೆಲಸ ಪ್ರಾರಂಭವಾಗಿದ್ದು, ಹುಕ್ಕೇರಿ ತಾಲೂಕಿನ ರೈತರು ಗೋಕಾಕ ಹೋಗುವ ರಸ್ತೆ ಸರ್ಕಲ್ ಬಳಿ ಜಮಾಯಿಸಿ ಜಾಕ್‌ವೆಲ್ ಕೆಲಸ ಆರಂಭವಾಗಿದ್ದ ಸ್ಥಳಕ್ಕೆ ಹೋಗಿ ಸಾಂಕೇತಿಕವಾಗಿ ಕಲ್ಲು ಮಣ್ಣು ತೆಗ್ಗಿನಲ್ಲಿ ಹಾಕಿದರು. ನಂತರ ಪಾದಯಾತ್ರೆ ಮೂಲಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದರು. ರೈತರನ್ನು ಮೋಸ ಮಾಡುತ್ತಿರುವ ರಾಜಕಾರಣಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ಹುಕ್ಕೇರಿ ತಾಲೂಕಿನ ರೈತರಿಗೆ ಇನ್ನೂ ನೀರಾವರಿ ಸೌಲಭ್ಯ ಸಿಗುತ್ತಿಲ್ಲ. ಹುಕ್ಕೇರಿ ತಾಲೂಕಿನ ಏತ ನೀರಾವರಿಗಳಿಗೆ ಕೊನೆಯ ಹೊಲದವರಿಗೆ ನೀರು ಸರಿಯಾಗಿ ತಲುಪುತ್ತಿಲ್ಲ. ಅಂತಹದರಲ್ಲಿ 80 ಕಿ.ಮೀ ದೂರದ ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಪೂರೈಕೆ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ನಮ್ಮ ತಾಲೂಕಿನಲ್ಲಿ ಕೈಗಾರಿಕೆ ಆರಂಭವಾದರೇ ಇಲ್ಲಿಯ ನಿರುದ್ಯೋಗ ಯುವಕರಿಗೆ ಉದ್ಯೋಗ ಸಿಗುತ್ತದೆ. ಇಂದಿನ ಹೋರಾಟವು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ. ನೀರು ಪೂರೈಕೆ ಕಾಮಗಾರಿಯು ಸ್ಥಗಿತಗೊಳಿಸದಿದ್ದರೇ ಮುಂದೆ ಹುಕ್ಕೇರಿ ತಾಲೂಕಿನ ಸಮಸ್ತ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.ಹಿಡಕಲ್ ಡ್ಯಾಮ್ ಕ.ನೀ.ನಿ. ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತ ಅರವಿಂದ ಎಚ್.ಜಮಖಂಡಿ ಮಾತನಾಡಿ, ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ವಲಯಕ್ಕೆ ನೀರು ಪೂರೈಕೆ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.