ರಾಜ್ಯ ಸರ್ಕಾರದಿಂದ ದ್ವೇಷ ರಾಜಕೀಯ: ಶಾಸಕ ದೊಡ್ಡನಗೌಡ ಪಾಟೀಲ

KannadaprabhaNewsNetwork |  
Published : Jul 20, 2025, 01:18 AM IST
1213231 | Kannada Prabha

ಸಾರಾಂಶ

ಕೊಲೆ ಕೇಸ್‌ನಲ್ಲಿ ಶಾಸಕ ಬೈರತಿ ಬಸವರಾಜ ಅವರನ್ನು ಸೇರಿಸಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಕೊಲೆ ಪ್ರಕರಣದ ಸಂತ್ರಸ್ತೆಯೇ ದೂರಿನಲ್ಲಿ ಬೈರತಿ ಬಸವರಾಜ ಅವರ ಹೆಸರು ನಾನು ಹೇಳಿಲ್ಲ ಎಂದಿದ್ದಾರೆ. ಆದರೆ, ಪೊಲೀಸರು ಇವರ ಹೆಸರನ್ನು ಸೇರಿಸಿದ್ದಾರೆ.

ಕೊಪ್ಪಳ:

ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸೇಡಿನ ರಾಜಕಾರಣ ಮಾಡುತ್ತಿದೆ. ಅದರಲ್ಲೂ ಅಹಿಂದ್‌ ನಾಯಕರನ್ನೇ ಟಾರ್ಗೆಟ್ ಮಾಡಿ ಕೇಸು ಹಾಕುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ಮುಖ್ಯಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಕೇಸ್‌ನಲ್ಲಿ ಶಾಸಕ ಬೈರತಿ ಬಸವರಾಜ ಅವರನ್ನು ಸೇರಿಸಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಕೊಲೆ ಪ್ರಕರಣದ ಸಂತ್ರಸ್ತೆಯೇ ದೂರಿನಲ್ಲಿ ಬೈರತಿ ಬಸವರಾಜ ಅವರ ಹೆಸರು ನಾನು ಹೇಳಿಲ್ಲ ಎಂದಿದ್ದಾರೆ. ಆದರೆ, ಪೊಲೀಸರು ಇವರ ಹೆಸರನ್ನು ಸೇರಿಸಿದ್ದಾರೆ. ವ್ಯವಹಾರವನ್ನು ಯಾರು ಬೇಕಾದರೂ, ಯಾರೊಂದಿಗಾದರೂ ಮಾಡಿರಬಹುದು. ಹಾಗಂತ ಕೊಲೆ ಪ್ರಕರಣದಲ್ಲಿ ಎಳೆದು ತರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಈ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎನ್ನುವ ವಿಶ್ವಾಸವಿದೆ. ಆದರೆ, ಮಾನಸಿಕವಾಗಿ ಕುಗ್ಗಿಸುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇವಲ ಬೈರತಿ ಬಸವರಾಜ ಅಷ್ಟೇ ಅಲ್ಲ, ವಿಧಾನಪರಿಷತ್ ಸದಸ್ಯ ರವಿಕುಮಾರ, ಸಿ.ಟಿ. ರವಿ, ಬಾಗೇಪಲ್ಲಿ ಮುನಿರಾಜು ಸೇರಿದಂತೆ ಅನೇಕ ನಾಯಕರ ಮೇಲೆ ಪದೇಪದೇ ಪ್ರಕರಣ ದಾಖಲಿಸಲಾಗುತ್ತಿದೆ ಎಂದ ಅವರು, ಪೊಲೀಸರು ಕಾನೂನು ರೀತಿ ಕ್ರಮವಹಿಸಬೇಕು. ಅದು ಬಿಟ್ಟು, ಬೇಕಾಬಿಟ್ಟಿ ಪ್ರಕರಣ ದಾಖಲಿಸುತ್ತಿದ್ದಾರೆ. ಈ ರೀತಿಯಾಗಿ ಮಾಡಿದರೆ ಇಂದಲ್ಲ ನಾಳೆ ನಾವು ಸಹ ಅಧಿಕಾರಕ್ಕೆ ಬರುತ್ತವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ವಿವಾದವನ್ನು ಮರೆಮಾಚಲು ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರ ಐಸಿಯುನಲ್ಲಿದೆ ಎಂದು ಹೇಳಿದ್ದಾರೆ. ಇನ್ನು ಸಚಿವ ಸಂಪುಟ ಪುನರ್ ರಚನೆಯಲ್ಲಿ ತಮ್ಮನ್ನು ಕೈಬಿಡುತ್ತಾರೆ ಎಂದು ಗೊತ್ತಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿ, ಕೇಂದ್ರ ನಾಯಕರ ಮನವೊಲಿಸುವ ಕಸರತ್ತು ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಲ್ಡೋಟಾ ವಿರುದ್ಧ ಪ್ರತಿಭಟನೆ ಗವಿಸಿದ್ಧೇಶ್ವರ ಸ್ವಾಮೀಜಿಗಳೇ ಸಚಿವರು, ಶಾಸಕರಿಗೆ ಕಟ್ಟಪ್ಪಣೆ ಮಾಡಿದರೂ ಸಹ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ರದ್ದುಪಡಿಸುವ ಆದೇಶವಾಗಿಲ್ಲ. ಹೀಗಾಗಿ, ಬಿಜೆಪಿ ಶೀಘ್ರದಲ್ಲಿಯೇ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಳ್ಳಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಬಲ್ಡೋಟಾ ವಿರುದ್ಧ ಹೋರಾಟಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಈ ವಿಷಯದಲ್ಲಿ ನಾವು ಈಗಾಗಲೇ ರಾಜ್ಯ ನಾಯಕರೊಂದಿಗೂ ಮಾತನಾಡಿದ್ದೇವೆ ಎಂದು ಅವರು, ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಸ್ಥಾಪಿಸಬಾರದು. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಡಿಸಿಗೆ ಕರೆ ಮಾಡಿ ಹೇಳಿದರೂ ಬಲ್ಡೋಟಾ ಕಾಮಗಾರಿ ಸ್ಥಗಿತವಾಗಿಲ್ಲ. ಹೀಗಾಗಿ, ಪ್ರತಿಭಟನೆ ಅನಿವಾರ್ಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು, ಪ್ರಮೋದ ಕುಲಕರ್ಣಿ, ಶರಣು ತಳ್ಳಿಕೇರಿ, ಮಹೇಶ ಹಾದಿಮನಿ ಇದ್ದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌