ಕನ್ನಡಪ್ರಭ ವಾರ್ತೆ, ತುಮಕೂರು ಕಾರ್ಯದರ್ಶಿ ನೇಮಕ ನಿರ್ಣಯವನ್ನು ಒಪ್ಪಿಕೊಳ್ಳದೆ ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಮಂಡಳಿಯನ್ನೇ ಸೂಪರ್ ಸೀಡ್ ಮಾಡಿರುವ ತುಮಕೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ ಸರಕಾರವನ್ನು ಒತ್ತಾಯಿಸಿದ್ದಾರೆ. ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ತುಮಕೂರಿನ ಗಾಂಧಿನಗರದಲ್ಲಿರುವ ಎ.ಆರ್.ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಎ.ಆರ್.ಅವರು ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ತಾಳಕ್ಕೆ ಹೆಜ್ಜೆಯಾಕುತ್ತಾ, ಆಡಳಿತ ಮಂಡಳಿಯ ನಿರ್ಣಯವನ್ನು ಧಿಕ್ಕರಿಸಿದ್ದಾರೆ. ಅಲ್ಲದೆ ಅಡಳಿತ ಮಂಡಳಿಯನ್ನೇ ರದ್ದು ಪಡಿಸಿದ್ದಾರೆ. ಇದು ಖಂಡನೀಯ. ರಾಜಕೀಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಿರುವ ಸಹಾಯಕ ನಿಬಂಧಕರನ್ನು ಸರಕಾರ ಕೂಡಲೇ ಇವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಬೇಗೂರು ಗ್ರಾಮಸ್ಥರಾದ ರಂಗಣ್ಣಗೌಡ ಮಾತನಾಡಿ, ಬೇಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಸಂಘದ ಕಾರ್ಯಚಟುವಟಿಕೆ ನಡೆಸಲು ಕಾರ್ಯದರ್ಶಿಯೊಬ್ಬರನ್ನು ನೇಮಕ ಮಾಡಿ, ಅನುಮೋದನೆ ನೀಡುವಂತೆ ತುಮಕೂರು ಉಪವಿಭಾಗದ ಸಹಕಾರ ಸಂಘಗಳ ಉಪನಿಬಂಧಕರಿಗೆ ಕಳುಹಿಸಿದ್ದಾರೆ. ಆದರೆ ಎ.ಆರ್.ಅವರು ರಾಜಕೀಯ ದುರುದ್ದೇಶದಿಂದ ಆಡಳಿತ ಮಂಡಳಿಯ ನಿರ್ಣಯ ಅನುಮೋದಿಸದೆ, ಯಾವುದೇ ಅವ್ಯವಹಾರ ನಡೆಸದ ಬೇಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸೂಪರ್ ಸೀಡ್ ಮಾಡಿದ್ದಾರೆ ಎಂದರು. ಗ್ರಾಮಸ್ಥರಾದ ಹರೀಶ್ ಮಾತನಾಡಿ, ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಿಂದ ಆಯ್ಕೆಯಾದ ಕಾರ್ಯದರ್ಶಿಯವರ ನೇಮಕಾತಿಯನ್ನು ಅನುಮೋದಿಸದೆ, ಇಲ್ಲ ಸಲ್ಲದೆ ಆರೋಪ ಮಾಡಿ, ಸಂಘವನ್ನೇ ಸೂಪರ್ ಸೀಡ್ ಮಾಡಿರುವುದು ಖಂಡನೀಯ. ಸೂಪರ್ ಸೀಡ್ ಮಾಡುವ ಮುನ್ನ ಅನುಸರಿಸಬೇಕಾದ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಏಕಪಕ್ಷಿಯ ನಿರ್ಧಾರಕೈಗೊಂಡಿದ್ದಾರೆ. ಹಾಗಾಗಿ ಎ.ಆರ್. ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಕೂಡಲೇ ಸೂಪರ್ ಸೀಡ್ ಆದೇಶ ವಾಪಸ್ ಪಡೆಯಬೇಕು. ಆಡಳಿತ ಮಂಡಳಿಯ ವಯೋ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನಿಯಮಬದ್ಧವಾಗಿ ಆಯ್ಕೆ ಮಾಡಿರುವ ಕಾರ್ಯದರ್ಶಿ ಸ್ಥಾನವನ್ನು ಒಪ್ಪಿಕೊಳ್ಳಬೇಕು.ಇಲ್ಲದಿದ್ದರೆ ಮತ್ತಷ್ಟುಉಗ್ರ ಹೋರಾಟ ನಡಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗುವುದುಎಂದು ಎಚ್ಚರಿಸಿದರು. ಈ ವೇಳೆ ಬೇಗೂರು ಹಾಲು ಉತ್ಪಾದಕರ ಸಹಕಾರ ಸಂಘದಅಧ್ಯಕ್ಷರಾದ ಶೇಖರ್,ನಿರ್ದೇಶಕರಾದ ಪ್ರಕಾಶ್, ಮಹೇಶ್, ದೇವರಾಜು,ರೇಣುಕಪ್ಪ, ಸೋಮಶೇಖರ್, ತಾಲೂಕು ಓಬಿಸಿ ಅಧ್ಯಕ್ಷರಾದ ಹುಚ್ಚಪ್ಪ ಮತ್ತಿತರರು ಪಾಲ್ಗೊಂಡಿದ್ದರು.