ಎಸ್ಪಿ ದೀಪನ್ ಮಾಹಿತಿ, 25 ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ
ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಪ್ರಯುಕ್ತ ಸಾರ್ವಜನಿಕ ಶಾಂತಿ-ಸುವ್ಯವಸ್ಥೆ ಹಾಗೂ ಸುಗಮ ಸಂಚಾರ ಕಲ್ಪಿಸಲು ರಚನಾತ್ಮಕವಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ಕನ್ನಡ ಪೊಲೀಸ್ ಅಧಿಕ್ಷಕ ದೀಪನ್ ಎನ್.ಎಂ. ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಿಂದ ಬಂದೋಬಸ್ತ್‌ಗಾಗಿ 3 ಡಿವೈಎಸ್ಪಿಗಳು, 10 ಸಿಪಿಐ ಮತ್ತು ಪಿಐಗಳು, 47 ಪಿಎಸ್ಐಗಳು, 110 ಎಎಸ್ಐಗಳು, 754 ಹೆಡ್ ಕಾನ್‌ಸ್ಟೇಬಲ್‌ಗಳು ಮತ್ತು ಪಿಸಿಗಳು, ಮತ್ತು 200 ಹೋಮಗಾರ್ಡ್ಸ್‌ಗಳನ್ನು ನೇಮಕ ಮಾಡಲಾಗಿದೆ. ಒಟ್ಟು 924 ಪುರುಷ ಸಿಬ್ಬಂದಿ ಮತ್ತು 200 ಹೋಮ್‌ಗಾರ್ಡ್ಸ್, ಕೆಎಸ್‌ಆರ್‌ಪಿ 3, ಡಿಎಆರ್ 5, ಆರ್ಮ್ಡ್ ಗಾಡ್ 1+4 ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.25 ನಿಗದಿತ ಸ್ಥಳದಲ್ಲಿ ಲಘು/ಬಾರಿ ವಾಹನ ಸವಾರರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು, ಭಟ್ಕಳ, ಕುಮಟಾ, ಸಾಗರ, ಸಿದ್ದಾಪುರ ಕಡೆಯಿಂದ ಬರುವ 7 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಶಿವಮೊಗ್ಗ, ಸೊರಬ, ಶಿಕಾರಿಪುರ, ಬನವಾಸಿ ಕಡೆಯಿಂದ ಬರುವ ವಾಹನಗಳಿಗೆ 5 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಾವೇರಿ, ಹಾನಗಲ್, ಹುಬ್ಬಳ್ಳಿ, ಯಲ್ಲಾಪುರ, ಮುಂಡಗೋಡ ಕಡೆಯಿಂದ ಬರುವ ವಾಹನಗಳಿಗೆ 13 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾಣಿಯಾದ ಮತ್ತು ಪತ್ತೆಯಾದ ಮಕ್ಕಳ ಮತ್ತು ಹಿರಿಯ ನಾಗರಿಕರ ಸಹಾಯಕ್ಕಾಗಿ 5 ವಿಶೇಷ ಸಹಾಯ ಕೇಂದ್ರ ತೆರೆಯಲಾಗಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲಾಗಿದ್ದು, 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಡಿವೈಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐಗಳಾದ ನಾಗಪ್ಪ ಬಿ., ಬಸವರಾಜ ಕನಶೆಟ್ಟಿ, ಸಂತೋಷ ಕುಮಾರ ಉಪಸ್ಥಿತರಿದ್ದರು.