ಬಗರ್‌ಹುಕುಂ ಸಾಗುವಳಿದಾರರ ಪರ ಹೋರಾಟ ನಿಶ್ಚಿತ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Aug 14, 2024, 12:53 AM IST
ಶಾಸಕ ಆರಗ ಜ್ಞಾನೇಂದ್ರ. | Kannada Prabha

ಸಾರಾಂಶ

ಸರ್ಕಾರ ಏಕಾಏಕಿ ಬಗರ್‌ ಹುಕುಂ ಸಾಗುವಳಿದಾರರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಮಲೆನಾಡು ರೈತರು ಪ್ಯಾನಿಕ್ ಆಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರ ವಾರ್ತೆ ಶಿವಮೊಗ್ಗ

ಬಗರ್ ಹುಕುಂ ಸಾಗುವಳಿ ಶ್ರಮಜೀವಿಗಳ ಅನ್ನ ಕಸಿಯಲು ಬಿಜೆಪಿ ಬಿಡಲ್ಲ. ಬದುಕು ಕಟ್ಟಿಕೊಳ್ಳಲು ಮಾಡಿರುವ ಸಾಗುವಳಿ ತೆರವಿಗೆ ಬಂದರೆ ಅಡ್ಡ ತಡೆಯುತ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆ.5ರಂದು ಅರಣ್ಯ ಸಚಿವರ ಆದೇಶ ಮಲೆನಾಡಿನ ರೈತರಲ್ಲಿ ಅನ್ನ ಕಸಿಯುವ ಆತಂಕ ಸೃಷ್ಟಿಯಾಗಿದೆ. ಆದರೆ, ಈಗ ರೈತರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಉಲ್ಲಂಘನೆಗೂ ಸಿದ್ಧ ಎಂದರು.

2015ರ ನಂತರ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ತೆರವುಗೊಳಿಸಲಾಗುತ್ತದೆ ಎಂಬ ಅರಣ್ಯ ಸಚಿವರ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ವೈನಾಡು ಮತ್ತು ಕೆಲವೆಡೆ ಗುಡ್ಡ ಕುಸಿತದ ಘಟನೆಯ ನಂತರ ಅದೇ ನೆಪವೊಡ್ಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಲವು ವರ್ಷಗಳ ಸಾಗುವಳಿ ದಾಖಲೆ ಇದ್ದರೂ ಸಹ ಏಕಾಏಕಿ ಬಗರ್‌ ಹುಕುಂ ಸಾಗುವಳಿದಾರರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಮಲೆನಾಡು ರೈತರು ಪ್ಯಾನಿಕ್ ಆಗಿದ್ದಾರೆ ಎಂದರು.

ಮಲೆನಾಡು ಭಾಗದ ಶಾಸಕರ ಸಭೆ ಕರೆದು ಸಚಿವ ಪ್ರಕಾಶ್ ಖಂಡ್ರೆ ಚರ್ಚೆ ಮಾಡಲಿ, ಅವರು ಬಯಲುಸೀಮೆ ಪ್ರದೇಶದವರು. ಇಲ್ಲಿನ ಸಮಸ್ಯೆ ಪರಿಚಯ ಅವರಿಗೆ ಇರಲ್ಲ. ಸಭೆ ಕರೆಯಲು ಒಪ್ಪಿದ್ದಾರೆ. ಆದರೆ, ಇನ್ನೂ ಸಭೆ ಕರೆದಿಲ್ಲ. ಪಹಣಿಯಲ್ಲಿ ಬಗರ್‌ ಹುಕುಂ ಭೂಮಿ ರೆವಿನ್ಯೂ ಅಂತ ಇದೆ. ಅದನ್ನು ಮಂಜೂರು ಮಾಡಿದ್ದಾರೆ. ಈಗ ಆ ಮಂಜೂರಾತಿ ರದ್ದು ಮಾಡಲು ಅರಣ್ಯ ಇಲಾಖೆ ಎಸಿ ಕೋರ್ಟ್‍ಗೆ ಹೋಗಿದ್ದಾರೆ. ಇದನ್ನು ಇಂಡೀಕರಣ ಮಾಡಿರಲಿಲ್ಲ. ಇಂಡೀಕರಣ ಪ್ರಕ್ರಿಯೆ ಈಗ ಶುರು ಮಾಡಿದ್ದಾರೆ. ಆದರೆ, ನೋಟಿಫಿಕೇಶನ್ ಆಗಬೇಕು. ಫೊಸಿಶನ್ ಯಾರಿದ್ದಾರೆ ನೋಡಬೇಕು. ಮನಬಂದಂತೆ ಕಾಯಿದೆ ದುರುಪಯೋಗ ಆಗುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್, ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣ, ಶಿವರಾಜ್, ಮಾಲತೇಶ್, ಪ್ರಮುಖರಾದ ವಿನ್ಸೆಂಟ್, ಭವಾನಿ ರಾವ್ ಮೋರೆ, ಚಂದ್ರಶೇಖರ್, ಅಣ್ಣಪ್ಪ, ಸುಮಲತಾ ಇದ್ದರು.

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ

ಹೊಸ ಒತ್ತುವರಿ ತೆರವಿಗೆ ವಿರೋಧ ಇಲ್ಲ. ಪರಿಸರವೂ ಉಳಿಯಬೇಕು. ಆದರೆ, ಅರಣ್ಯ ಇಲಾಖೆ ಹುಚ್ಚು ಕುದುರೆ ರೀತಿ ಆಡುತ್ತಿದೆ. ಮಂತ್ರಿಗಳು, ಕೋರ್ಟ್ ಹೇಳಿದರು ಅಂತ ತೆರವು ಮಾಡಲಾಗುತ್ತಿದೆ. ಅರಣ್ಯ ಸಚಿವರು ಬೇಗ ಸಭೆ ಕರೆಯಲಿ, ಕಸ್ತೂರಿ ರಂಗನ್ ವರದಿ ಗೊಂದಲವಿದೆ. ಸಿಎಂ ಈ ವರದಿಯನ್ನು ಒಪ್ಪು ವುದಿಲ್ಲ ಎನ್ನುತ್ತಿದ್ದಾರೆ. ಆದರೆ, ಅರಣ್ಯ ಸಚಿವರು ಜಾರಿಗೊಳಿಸುತ್ತೇವೆ ಎನ್ನುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಅಧಿಸೂಚನೆ ಆಗಿದೆ. ಅದಕ್ಕೆ ರಾಜ್ಯ ಸರ್ಕಾರ ತಕರಾರು ಸಲ್ಲಿಸಬೇಕು. ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಇದೀಗ ಸುಪ್ರೀಂ ಕೋರ್ಟ್ ಹಸಿರು ಪೀಠದ ಮುಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಮನ್ವಯ ಸಾಧಿಸಿ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಿ ಬಗರ್‌ಹುಕುಂ ಸಾಗುವಳಿ ರೈತರ ಪರ ನಿಲ್ಲಬೇಕು ಎಂದು ಆರಗ ಜ್ಞಾನೇಂದ್ರ ಒತ್ತಾಯಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ