ಹೇಮಾವತಿ ನೀರಿಗಾಗಿ ಹೋರಾಟ: ಪಕ್ಷಾತೀತವಾಗಿ ಬೆಂಬಲಿಸಿ

KannadaprabhaNewsNetwork | Published : May 19, 2024 1:51 AM

ಸಾರಾಂಶ

ಮಾಗಡಿ: ತುಮಕೂರಿನ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಮಾಗಡಿಗೆ ಎಕ್ಸ್‌ಪ್ರೆಸ್‌ ಕೆನಾಲ್ ಮೂಲಕ ಹೇಮಾವತಿ ನೀರು ತರಲು ವಿರೋಧಿಸುತ್ತಿರುವುದನ್ನು ಖಂಡಿಸಿ ಪಕ್ಷಾತೀತ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕಿದೆ ಎಂದು ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಮನವಿ ಮಾಡಿದರು.

ಮಾಗಡಿ: ತುಮಕೂರಿನ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಮಾಗಡಿಗೆ ಎಕ್ಸ್‌ಪ್ರೆಸ್‌ ಕೆನಾಲ್ ಮೂಲಕ ಹೇಮಾವತಿ ನೀರು ತರಲು ವಿರೋಧಿಸುತ್ತಿರುವುದನ್ನು ಖಂಡಿಸಿ ಪಕ್ಷಾತೀತ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕಿದೆ ಎಂದು ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ತಾಲೂಕಿಗೆ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಇದ್ದು, ಹೇಮಾವತಿ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದರೂ ಯಾವುದೇ ಪ್ರಗತಿ ಕಂಡಿಲ್ಲ. ಈಗ ನೀರು ಬರುವ ಸಮಯದಲ್ಲಿ ತುಮಕೂರಿನ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ನಾವು ಬೇರೆ ರಾಜ್ಯದಲ್ಲಿ ಇಲ್ಲ, ಇಲ್ಲಿಯ ರೈತರು ವ್ಯವಸಾಯವನ್ನೇ ನಂಬಿ ಬದುಕುತ್ತಿದ್ದಾರೆ. ಬೇರೆ ಉದ್ಯೋಗವಕಾಶಗಳು ಇಲ್ಲದ ಕಾರಣ ನೀರು ಬಿಡದಂತೆ ವಿರೋಧ ಮಾಡುವುದು ಸರಿಯಲ್ಲ. ಪ್ರಕೃತಿಯಲ್ಲಿ ದೊರೆಯುವ ನೀರನ್ನು ಸಮನಾಗಿ ಹಂಚಿಕೊಂಡು ಸಹೋದರರಂತೆ ಬದುಕುವುದು ಬಿಟ್ಟು ಈ ರೀತಿ ವಿರೋಧಿಸುವುದು ಸರಿಯಲ್ಲ. ಮಾಗಡಿ ತಾಲೂಕಿಗೆ ನೀರು ಬಿಡುವುದಿಲ್ಲ ಎಂದು ಹೇಳುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ತುಮಕೂರು ಜನಪ್ರತಿನಿಧಿಗಲು ಅವರ ಪರವಾಗಿದ್ದರೆ, ನಾವು ಮಾಗಡಿ ತಾಲೂಕಿನ ಜನತೆ ಪರವಾಗಿ ನಿಲ್ಲುತ್ತೇವೆ. ನಾವು ಹೋರಾಡುತ್ತೇವೆ. ಪಕ್ಷಾತೀತವಾಗಿ ಎಲ್ಲಾ ಸಂಘಟನೆಯ ಮುಖಂಡರು, ರೈತ ಸಂಘಗಳು ಮಾಧ್ಯಮ ಬಳಗ ಸೇರಿ ನಮಗೆ ಬೆಂಬಲ ಕೊಡುವ ಮೂಲಕ ಮಾಗಡಿ ತಾಲೂಕಿಗೆ ಹೇಮಾವತಿ ಬರುವ ನಿಟ್ಟಿನಲ್ಲಿ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ತುಮಕೂರಿನ ಸಚಿವರಿಗೆ, ಶಾಸಕರಿಗೆ ಯಾವುದೇ ಕಾರಣಕ್ಕೂ ಈ ಯೋಜನೆಗೆ ವಿರೋಧವಾಗದಂತೆ ಎಕ್ಸ್‌ಪ್ರೆಸ್‌ ಕೆನಾಲ್ ಮೂಲಕ ಮಾಗಡಿ ತಾಲೂಕಿಗೆ ನೀರು ತರಬೇಕು. ನಮಗೆ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿ ಬಗ್ಗೆ ವಿರೋಧ ಕೂಡ ಇಲ್ಲ. ಮಾಗಡಿ ತಾಲೂಕಿಗೆ ಹೇಮಾವತಿ ನೀರು ಬೇಕಷ್ಟೆ. ತುಮಕೂರು ಜಿಲ್ಲೆ ಕೈಗಾರಿಕೆ ಸೇರಿದಂತೆ ಎಲ್ಲಾ ರಂಗದಲ್ಲೂ ಸಮೃದ್ಧಿಯಾಗಿದ್ದು ಹಿಂದುಳಿದ ತಾಲೂಕಾಗಿರುವ ಮಾಗಡಿಗೆ ಅನ್ಯಾಯ ಆಗದಂತೆ ಉಪಮುಖ್ಯಮಂತ್ರಿಗಳು ಕ್ರಮ ವಹಿಸುವ ವಿಶ್ವಾಸವಿದೆ ಎಂದರು.

ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ತಾಲೂಕು ಅಧ್ಯಕ್ಷ ವೀರಭದ್ರ, ಬಿಜೆಪಿ ಮುಖಂಡರಾದ ಬಿಡದಿ ಸುದೀಪ್, ತಿರುಮಲೆ ನಾರಾಯಣ್ ಸ್ವಾಮಿ, ಭಾಸ್ಕರ್, ಬಾಲಾಜಿ, ಶಶಿ, ಗೌತಮ್ ಇತರರು ಭಾಗವಹಿಸಿದ್ದರು.

ಬಾಕ್ಸ್‌........

ನಾಳೆ ನೀರಿಗಾಗಿ ಪ್ರತಿಭಟನೆ: ಬಿಜೆಪಿಯಿಂದ ಮೇ 20ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ತಾಲೂಕು ಕಚೇರಿ ಮುಂದೆ ಹೇಮಾವತಿ ನೀರಿಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರತಿಭಟನೆಗೆ ಎಲ್ಲಾ ಸಂಘಟನೆಗಳು ಸಹಕರಿಸಬೇಕು. ಇದು ಒಂದು ಪಕ್ಷದ ಪ್ರತಿಭಟನೆ ಅಲ್ಲ. ಪಕ್ಷಾತೀತ ಹೋರಾಟ. ಪ್ರತಿಭಟನೆಗೆ ಎಲ್ಲರೂ ಸಹಕರಿಸಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮಗೆ ಹೇಮಾವತಿ ನೀರು ಬರೆಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರಸಾದ್ ಗೌಡ ತಿಳಿಸಿದರು.ಪೋಟೋ 18ಮಾಗಡಿ1:

ಮಾಗಡಿಯಲ್ಲಿ ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಸುದ್ದಿಗಾರರೊಂದಿಗೆ ಮಾತನಾಡಿದರು.

Share this article