ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನೀರಿಗಾಗಿ ಹೋರಾಟ ತೀವ್ರಗೊಂಡಿದ್ದು, ಕೆರೆಗಳ ಮಾಲಿನ್ಯದ ವಿರುದ್ಧ ನಡೆದಿರುವ ಹೋರಾಟದ ವೇಳೆ ಕೊಟ್ಟ ಭರವಸೆಗಳನ್ನು ಈಡೇರಿಸದ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ.ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದು, ದೊಡ್ಡಬಳ್ಳಾಪುರ ನಗರಸಭೆ ಹಾಗೂ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ನೀರನ್ನು ಸಂಸ್ಕರಿಸದೇ ಈ ಭಾಗದ ಕೆರೆಗಳಿಗೆ ಹರಿಸುತ್ತಿರುವ ಪರಿಣಾಮ ಇಡೀ ಕೆರೆಗಳು ಮಲೀನಗೊಂಡಿವೆ. ನೀರು ಕುಡಿಯಲು, ಬಳಸಲು ಯೋಗ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಹೋರಾಟಕ್ಕೆ ವರ್ಷಗಳೇ ಉರುಳಿದರೂ ಪರಿಹಾರ ಮಾತ್ರ ಮರೀಚಿಕೆಯಾಗಿದೆ, ಗ್ರಾಮಸ್ಥರು ಇದೀಗ ಮತದಾನ ಬಹಿಷ್ಕರಿಸುವ ಮೂಲಕ ವ್ಯವಸ್ಥೆಯ ಲೋಪದ ವಿರುದ್ಧ ದನಿಯೆತ್ತಿದ್ದಾರೆ.
ಉಭಯ ಪಂಚಾಯಿತಿಗಳ ಗ್ರಾಮಸ್ಥರ ಒಮ್ಮತದ ನಿರ್ಣಯ:ಮಜರಾಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ಅರ್ಕಾವತಿ ವ್ಯಾಪ್ತಿಯ ಕೆರೆಗಳ ಸಂರಕ್ಷಣಾ ಹೋರಾಟ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡ ಡಾ.ಟಿ.ಎಚ್.ಆಂಜನಪ್ಪ, ದೊಡ್ಡ ತುಮಕೂರು ಮತ್ತು ಮಜಾರಹೊಸಹಳ್ಳಿ ಗ್ರಾಪಂಯ ಎಲ್ಲಾ ಮುಖಂಡರು ಹಾಗೂ ಗ್ರಾಮಸ್ಥರ ಒಮ್ಮತದೊಂದಿಗೆ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ. ನಗರಸಭೆ, ಪಟ್ಟಣ ಪಂಚಾಯತಿಯವರು ಮತ್ತು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕೊಳಚೆ ಮತ್ತು ರಾಸಾಯನಿಕ ನೀರನ್ನು ಶುದ್ಧೀಕರಿಸದೆ ನೇರವಾಗಿ ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿದ್ದಾರೆ. ಇದರಿಂದ ಚಿಕ್ಕ ತುಮಕೂರು ಕೆರೆ ಮತ್ತು ದೊಡ್ಡ ತುಮಕೂರು ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ. ಕೇವಲ ಕೆರೆ ನೀರಷ್ಟೇ ಅಲ್ಲದೆ ಕೊಳವೆ ಬಾವಿ ನೀರು ಮತ್ತು ಶುದ್ಧೀಕರಣ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ ಎಂದು ವಿವರಿಸಿದರು.
3 ವರ್ಷಗಳ ಹೋರಾಟ, ಪರಿಹಾರ ಮರೀಚಿಕೆ:ಎರಡು ಪಂಚಾಯತಿಯ ಜನರು ಮೂರು ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನೀರು ಶುದ್ಧೀಕರಿಸುವ ಕಾರ್ಯವನ್ನು ಇನ್ನು ಕೈಗೊಂಡಿಲ್ಲ.
ಈ ಹಿಂದೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಎರಡನೇ ಹಂತದ ಶುದ್ಧೀಕರಣ ಘಟಕ ಮಾಡಲಾಗುವುದು ಎಂದು ತಿಳಿಸಿದ್ದರು. ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ಮೂರು ಹಂತದ ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಚ್.ಕೆಂಪಣ್ಣ, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ರಂಗರಾಜು, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ.ಎಚ್.ಜಿ.ವಿಜಯಕುಮಾರ್, ಮುಖಂಡರಾದ ಆದಿತ್ಯ ನಾಗೇಶ್, ಸಂದೇಶ್, ಗ್ರಾಪಂ ಸದಸ್ಯೆ ಚೈತ್ರ ಭಾಸ್ಕರ್, ಮಾಜಿ ಉಪಾಧ್ಯಕ್ಷೆ ಚೈತ್ರ ಶ್ರೀಧರ್, ಟಿ.ಜಿ.ಮಂಜುನಾಥ್, ರೈತ ಮುಖಂಡರಾದ ವಸಂತ್ ಕುಮಾರ್, ಸತೀಶ್, ರಮೇಶ್ ಸೇರಿ ನೂರಾರು ರೈತರು, ಉಭಯ ಗ್ರಾಪಂಗಳ ಗ್ರಾಮಸ್ಥರು ಉಪಸ್ಥಿತರಿದ್ದರು.
3 ಹಕ್ಕೊತ್ತಾಯಗಳ ಮಂಡನೆ:1. ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರು ಸಂಸ್ಕರಣೆಗೆ ಮೂರು ಹಂತದ ಶುದ್ಧೀಕರಣ ಘಟಕವನ್ನು ಸ್ಥಾಪಿಸಬೇಕು.
2. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಎರಡು ಪಂಚಾಯತಿಯ ಎಲ್ಲ ಹಳ್ಳಿಗಳಿಗೆ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆಮಾಡಲು ಕ್ರಮ ವಹಿಸುವ ಬಗ್ಗೆ ತಿಳಿಸಿದ್ದರು. ಆದರೆ ಕೆಲವೇ ಹಳ್ಳಿಗಳಿಗೆ ಕೊಟ್ಟು ಉಳಿದ ಹಳ್ಳಿಗಳಿಗೆ ಕೊಡುತ್ತಿಲ್ಲ. ಎಲ್ಲ ಹಳ್ಳಿಗಳಿಗೂ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆಮಾಡಬೇಕು.3. ಎರಡು ಪಂಚಾಯತಿಯ ಪ್ರತಿ ಮನೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಬೇಕು, ಸದರಿ ಕಾಮಗಾರಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಅಥವಾ ಕಾರ್ಖಾನೆಗಳ ಧನಸಹಾಯದಿಂದ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ಮಳೆ ಕೊಯ್ಲು ಪದ್ಧತಿಯನ್ನು ಮಾಡಿಕೊಡಬೇಕು.
3 ಹಂತದ ಶುದ್ದೀಕರಣ ಘಟಕಕ್ಕೆ ಹಕ್ಕೊತ್ತಾಯ:ಕುಡಿಯುವ ನೀರು ನಮ್ಮ ಹಕ್ಕು, ನಮ್ಮ ಒತ್ತಾಯವನ್ನು ಈಡೇರಿಸದಿದ್ದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತಗಳಲ್ಲಿ ಶುದ್ಧಿಕರಿಸಿ ಕೋಲಾರದ ಕಡೆಗೆ ಹರಿಸುತ್ತಿದ್ದಾರೆ. ಇದರಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು ಅದಕ್ಕೆ ಉದಾಹರಣೆಯಾಗಿ ಆ ನೀರಿನಲ್ಲೂ ಸಹ ಸಾವಿರಾರು ಮೀನುಗಳು ಸತ್ತ ಉದಾಹರಣೆಗಳಿವೆ. ಅಂತರ್ಜಲ ಸಹ ಕೆಟ್ಟಿರುವ ದಾಖಲಾತಿಗಳಿವೆ. ಈ ಭಾಗದಲ್ಲಿ ಬೆಳೆಯುವ ತರಕಾರಿಗಳಲ್ಲೂ ರಾಸಾಯನಿಕ ಅಂಶಗಳು ಇರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದ್ದರಿಂದ ಎರಡನೇ ಹಂತದ ಶುದ್ಧೀಕರಣ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಎರಡು ಹಂತದ ಶುದ್ಧೀಕರಣ ಘಟಕವನ್ನು ಕೈ ಬಿಟ್ಟು ಮೂರು ಹಂತದ ಶುದ್ಧೀಕರಣ ಘಟಕ ಮಾಡಬೇಕೆಂದು ಅಗ್ರಹಿಸಿದರು.