28ರೊಳಗೆ ನಾಮಫಲಕದಲ್ಲಿ ಕನ್ನಡ ಇಲ್ಲದಿದ್ದರೆ ಹೋರಾಟ: ಕರವೇ ಚಂದ್ರಶೇಖರ್‌

KannadaprabhaNewsNetwork | Published : Feb 24, 2024 2:31 AM

ಸಾರಾಂಶ

ಇದೇ ೨೮ರ ನಂತರ ಸಂಬಂಧಪಟ್ಟ ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟ ಮಾಡುವುದು ಶತಸಿದ್ಧ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಎಚ್ಚರಿಕೆ ನೀಡಿದರು. ಬೇಲೂರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಚ್ಚರಿಕೆ । ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ । ಶೇ.60 ರಷ್ಟು ಕನ್ನಡ ಬಳಸಲು ಆಗ್ರಹ

ಕನ್ನಡಪ್ರಭ ವಾರ್ತೆ ಬೇಲೂರು

ರಾಜ್ಯದಲ್ಲಿ ಶೇ.60 ರಷ್ಟು ಕನ್ನಡ ಪದಗಳಿರುವ ನಾಮಫಲಕಗಳನ್ನು ಅಳವಡಿಸಬೇಕು ಎಂಬ ಸರ್ಕಾರದ ಕಾನೂನಿದ್ದರೂ ಸಹ ಅದನ್ನು ಅನೇಕರು ಪಾಲಿಸುತ್ತಿಲ್ಲ. ಅದ್ದರಿಂದ ಸಂಬಂಧಿಸಿದವರು ತಪ್ಪು ತಿದ್ದಿಕೊಂಡು ನಡೆಯದಿದ್ದರೆ ಇದೇ ೨೮ರ ನಂತರ ಸಂಬಂಧಪಟ್ಟ ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟ ಮಾಡುವುದು ಶತಸಿದ್ಧ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಎಚ್ಚರಿಕೆ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು. ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ತಾಲೂಕಿನ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅನ್ಯಭಾಷಿಗರೂ ಕೂಡ ಕನ್ನಡದಲ್ಲೇ ವ್ಯವಹರಿಸಬೇಕು. ರಾಜ್ಯ ಭಾಷೆಗೆ ಧಕ್ಕೆ ತರುವ ಕೆಲಸ ಮಾಡಿದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.

‘ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಲ್ಲಿ ನಮ್ಮ ಸಂಘಟನೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ನಡೆದ ಹೋರಾಟ ಯಶಸ್ವಿಯಾಗಿದೆ. ನಮ್ಮ ಹೋರಾಟದ ನಂತರ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಎಂದು ಸರ್ಕಾರ ಅಧಿವೇಶನದಲ್ಲಿ ವಿಧೇಯಕ ಅಂಗೀಕರಿಸಿದೆ. ರಾಜ್ಯಾದ್ಯಂತ ಎಲ್ಲಾ ಅಂಗಡಿ, ಬಾರ್ ಸೇರಿದಂತೆ ಎಲ್ಲಾ ಕಡೆ ಶೇ.60 ರಷ್ಟು ಕನ್ನಡ ನಾಮಫಲಕಗಳಿರಬೇಕು. ಪೆಟ್ರೋಲ್ ಬಂಕ್ ಹಾಗೂ ಬ್ಯಾಂಕ್‌ಗಳು ಸೇರಿದಂತೆ ಹಲವಾರು ಅಂಗಡಿ ಮುಂಗಟ್ಟುಗಳಲ್ಲಿ ಅಂಗ್ಲ ಮಾಧ್ಯಮದ ನಾಮಫಲಕಗಳು ರಾರಾಜಿಸುತ್ತಿದ್ದು ಈ ಕೂಡಲೇ ಅವುಗಳನ್ನು ತೆರೆವುಗೊಳಿಸಬೇಕೆಂದು ಆಗ್ರಹಿಸಿದರು.

ತಾಲೂಕಿನ ೩೭ ಗ್ರಾಪಂ ವ್ಯಾಪ್ತಿಯಲ್ಲಿ ಹಾಗೂ ಪುರಸಭೆ ವ್ಯಾಪ್ತಿಗೆ ಬರುವಂತಹ ಸಂಬಂಧಪಟ್ಟ ವಾಣಿಜ್ಯ ಸಂಕೀರ್ಣಗಳಿಗೆ ವ್ಯವಹರಿಸುವ ಪ್ರತಿಯೊಬ್ಬ ಮಾಲಿಕರು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕೆ ಫೆ ೨೮ರ ವರೆಗೆ ಗಡುವು ನೀಡಿದ್ಸು ಇವುಗಳ ಬಗ್ಗೆ ಗಮನ ಹರಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗಳ ಮುಂಭಾಗದಲ್ಲಿ ಉಗ್ರವಾಗಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರವೇ ಕಾರ್ಯದರ್ಶಿ ಖಾದರ್ ಮಾತನಾಡಿ, ಕನ್ನಡ ಭಾಷೆ ವಿಚಾರದಲ್ಲಿ ಧಕ್ಕೆಯಾದರೆ ಕರವೇ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಲಿದೆ. ನಾಮಫಲಕ ಅಳವಡಿಕೆ ವಿಚಾರದಲ್ಲಿ ಎಲ್ಲರೂ ಸರ್ಕಾರದ ಆದೇಶ ಪಾಲನೆ ಮಾಡಬೇಕು. ನಿರ್ಲಕ್ಷ್ಯ ಅಥವಾ ಅಸಡ್ಡೆ ತೋರಿದರೆ ಮಸಿ ಬಳಿಯುವ ಹೋರಾಟ ಆರಂಭವಾಗಲಿದೆ ಎಂದರು.

ಪಟ್ಟಣದ ಎಲ್ಲಾ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಹಾಕದಿದ್ದರೆ ಹೋರಾಟ ಅನಿವಾರ್ಯ. ಈಗಲೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಕನ್ನಡ ಕಡಗಣನೆ ಮಾಡುತ್ತಿರುವವರಿಗೆ ಸೂಚನೆ ನೀಡಬೇಕು. ಸ್ಪಂದಿಸದಿದ್ದರೆ ಅಂಥವರ ಟ್ರೇಡ್ ಲೈಸೆನ್ಸ್ ರದ್ದು ಪಡಿಸುವಂತೆ ಆಗ್ರಹಿಸಿದರು.

ಕರವೇ ತಾಲೂಕು ಉಪಾಧ್ಯಕ್ಷ ಅನೀಫ್, ಕಾರ್ಯದರ್ಶಿ ಕುಮಾರ, ನಗರ ಅಧ್ಯಕ್ಷ ಪ್ರಸನ್ನ ಇದ್ದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರುಶೇಖರ್ ಬೇಲೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article