ಗದಗ: ಕಾವ್ಯಗಳಲ್ಲಿಯೇ ನಾಟಕ ರಮ್ಯವಾದುದು. ನವರಸಗಳಿಂದ ಸಂಪದ್ಭರಿತವಾದ ನಾಟಕಗಳು ಜನಮಾನಸವನ್ನು ಬೇಗನೇ ತಲುಪಿ ಮನರಂಜನೆಯ ಜೊತೆಗೆ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿವೆ. ಕನ್ನಡದ ರಂಗಭೂಮಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾದುದು ಎಂದು ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಕಸಾಪ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಗದಗು ಸಾಂಸ್ಕೃತಿಕವಾಗಿ ಶ್ರೀಮಂತ ಪ್ರದೇಶವಾಗಿದೆ. ಕರ್ನಾಟಕದ ನಿಜವಾದ ಸಾಂಸ್ಕೃತಿಕ ರಾಜಧಾನಿ ಗದಗ. ಇಲ್ಲೆ ಸಾಹಿತ್ಯ, ಸಂಗೀತ, ರಂಗಭೂಮಿ ಕ್ಷೇತ್ರಗಳು ಪ್ರಾಚೀನ ಕಾಲದಿಂದಲೂ ಮೂಲ ನೆಲೆಯಾಗಿ ಗುರುತಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಸಂಘಟನೆಗಳ ಜೊತೆಗೂಡಿ ಸಾಂಸ್ಕೃತಿಕ ವೈಭವವನ್ನು ಪಸರಿಸುವ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ಕೆ ಸಾಂಸ್ಕೃತಿಕ ಮನಸ್ಸಿನ ಜನ ಕೈಜೋಡಿಸುತ್ತಿರುವದು ಪೂರಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಈ ವೇಳೆ ನಾಟಕೋತ್ಸವ ಸಂಚಾಲಕ ಡಾ.ಜಿ.ಬಿ. ಪಾಟೀಲ, ಅಶೋಕ ಬರಗುಂಡಿ, ಡಾ. ಅನಂತ ಶಿವಪೂರ, ಸಾಹಿತಿ ಪ್ರೊ.ಚಂದ್ರಶೇಖರ ವಸ್ತ್ರದ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ರ, ವೈದ್ಯ ಡಾ. ಶೇಖರ ಸಜ್ಜನರ ಇದ್ದರು. ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ವಂದಿಸಿದರು.ಮೂರು ದಿನಗಳ ನಾಟಕೋತ್ಸವದಲ್ಲಿ ಡಾ. ನಟರಾಜ ಬೂದಾಳ ಅವರು ರಚಿಸಿದ ಸಿ. ಬಸವಲಿಂಗಯ್ಯ ನಿರ್ದೇಶಿಸಿದ ಕಲ್ಯಾಣದ ಬಾಗಿಲು ನಾಟಕ, ಕೆ.ಎನ್.ಸಾಳುಂಕೆ ರಚಿಸಿದ, ಮಾಲತೇಶ ಬಡಿಗೇರ ನಿರ್ದೇಶಿಸಿದ ತಾಳಿಯ ತಕರಾರು ಹಾಗೂ ಜಯಂತಕಾಯ್ಕಿಣಿ ರಚಿಸಿದ ಹುಲಗಪ್ಪ ಕಟ್ಟಿಮನಿ ನಿರ್ದೇಶಿಸಿದ ಜತೆಗಿರುವನು ಚಂದಿರ ನಾಟಕಗಳು ಪ್ರದರ್ಶನಗೊಂಡು ರಂಗಾಸಕ್ತರ ಮನ ತಣಿಸಿದವು.