ಕನ್ನಡಪ್ರಭ ವಾರ್ತೆ ಕಲಬುರಗಿ
ಫೆ.22ರಂದು ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಸೇವೆಯ ಪ್ರಾರಂಭೋತ್ಸವ ನಿಮಿತ್ತ ಅಲಯನ್ಸ್ ಏರ್ ವಿಮಾನವನ್ನು ಸ್ವಾಗತಿಸಿದ ನಂತರ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ವಿಭಾಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವಿಮಾನ ಯಶಸ್ವಿಯಾಗಿ ಇಳಿದು ಸೇವೆ ಪ್ರಾರಂಭಗೊಳಿಸಿದ್ದಕ್ಕೆ ಸಂತಸವಾಗಿದೆ. ಇದು ಅಭಿವೃದ್ಧಿಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದಂತಾಗಿದೆ. ಮೊದಲ ವಿಮಾನದಲ್ಲಿ ಬೆಂಗಳೂರಿಂದ ಇತರ 46 ಪ್ರಯಾಣಿಕರ ಜೊತೆ ಆಗಮಿಸುವುದರ ಮೂಲಕ ಹಾಗೂ ಇಲ್ಲಿಂದ 57 ಜನರನ್ನು ಬೆಂಗಳೂರಿಗೆ ಕಳುಹಿಸುವ ಮೂಲಕ ಈ ಸಂಭ್ರಮಕ್ಕೆ ಕಳೆ ಕಟ್ಟಿದೆ ಎಂದು ಹೇಳಿದರು. ಬಹುದಿನಗಳ ಕನಸು ಈಗ ಸಾಕಾರಗೊಂಡು ಸಂಸದನಾಗಿ ಧನ್ಯತಾ ಭಾವ ಬಂದಿದೆ. ಈ ಸೇವೆ ನಿರಂತರವಾಗಿ ಯಶಸ್ವಿ ಹೊಂದಲು ಪ್ರಯಾಣಿಕರು ಸಹಕರಿಸಬೇಕು.ಮುಂದಿನ ದಿನಗಳಲ್ಲಿ ಮುಂಬೈ, ಮಂಗಳೂರು, ದೆಹಲಿ ಮುಂತಾದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಪ್ರಾರಂಭಿಸಲು ವಿಮಾನಯಾನಖಾತೆಯ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯ ಅವರೊಂದಿಗೆ ಬುಧವಾರವಷ್ಟೇ ಮಾತುಕತೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಅಭಿವೃದ್ಧಿ ಕೆಲಸವನ್ನು ಸಾಧಿಸಲು ನೆರವಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಸಿಂಧ್ಯಾ ಅವರಿಗೆ ಅಭಿನಂದನೆ ವ್ಯಕ್ತಪಡಿಸುವುದಾಗಿ ಹೇಳಿ ಸದ್ಯ ಪ್ರತಿ ಗುರುವಾರ ಸಂಚರಿಸುವ ವಿಮಾನಸೇವೆಯನ್ನು ವಾರಪೂರ್ತಿ ಸಂಚರಿಸುವಂತೆ ಪ್ರಯತ್ನಿಸಲಾಗುವುದು ಎಂದು ಜಾಧವ್ ಭರವಸೆ ನೀಡಿದರು.
ಗುತ್ತೇದಾರ್‌ಗೆ ಮೊದಲ ಬೋರ್ಡಿಂಗ್ ಪಾಸ್: ಕಲಬುರಗಿಯಿಂದ ಬೆಂಗಳೂರಿಗೆ ಮೊದಲ ಸಂಚಾರ ಪ್ರಾರಂಭಿಸಿದ ಪ್ರಯಾಣಿಕರ ಮೊದಲ ಬೋರ್ಡಿಂಗ್ ಪಾಸ್ ಅನ್ನು ಮಾಜಿ ಸಚಿವರು ಮತ್ತು ಬಿಜೆಪಿಯ ಹಿರಿಯ ನಾಯಕ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸಂಸದ ಡಾ. ಉಮೇಶ್ ಜಾದವ್ ಹಸ್ತಾಂತರಿಸಿ ಪ್ರಯಾಣಕ್ಕೆ ಚಾಲನೆ ನೀಡಿದರು. ನಂತರ ಕೇಕ್ ಕತ್ತರಿಸಿ ಸಂಸದರು ಎಲ್ಲರಿಗೂ ಸಿಹಿ ತಿನ್ನಿಸಿ ಐತಿಹಾಸಿಕ ದಿನದ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಬೋರ್ಡಿಂಗ್ ಪಾಸ್ ಸ್ವೀಕರಿಸಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್ "ಕೊಟ್ಟ ಮಾತು ಉಳಿಸಿದ ಸಂಸದ " ಎಂಬ ಹೆಗ್ಗಳಿಕೆಗೆ ಜಾಧವ್ ಪಾತ್ರರಾಗಿದ್ದಾರೆ ಎಂದರು.
ಮೊದಲ ವಿಮಾನಕ್ಕೆ ನೀರಿನೋಕುಳಿ ಸಂಭ್ರಮ: ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಝಗಮಗಿಸುವ ಬೆಳಕಿನ ನಡುವೆ ಮುಖ್ಯ ಕ್ಯಾಪ್ಟನ್ ಮರ್ವಿನ್ ವಿಲ್ಲಾಲಾಬೋಸ್ ಹಾಗೂ ಎರಡನೇ ಪೈಲೆಟ್ ಅಕ್ಷಯ್ ಭೂಪ್ತಾನಿ ವಿಮಾನವನ್ನು ಭೂಸ್ಪರ್ಶ ಮಾಡಿದಾಗ ವಿಮಾನದ ಮೇಲೆ ಎರಡು ಕಡೆಗಳಿಂದ ನೀರಿನ ಓಕುಳಿಯೊಂದಿಗೆ ಸಂಭ್ರಮದಿಂದ ಸ್ವಾಗತಿಸಲಾಯಿತು . ವಿಮಾನ ನಿಲ್ದಾಣವನ್ನು ಬಣ್ಣ ಬಣ್ಣದ ಬಲೂನುಗಳಿಂದ ಶೃಂಗರಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣ ನಿರ್ದೇಶಕರಾದ ಮಹೇಶ್ ಚಿಲ್ಕಾ ಎಲ್ಲರನ್ನು ಸ್ವಾಗತಿಸಿದರು.