ಹೊಸಯಲ್ಲಾಪುರ ಘನತ್ಯಾಜ್ಯ ವಿಲೇವಾರಿ ಘಟಕದ ಕಸದ ಗುಡ್ಡೆಗೆ ಎರಡ್ಮೂರು ದಿನಗಳಿಂದ ಹೊತ್ತಿಕೊಂಡ ಪರಿಣಾಮ ನಗರಾದ್ಯಂತ ಜನರು ವಿಷಕಾರಿ ಹೊಗೆಯಿಂದ ತತ್ತರಿಸಿದ್ದರು. ಇದನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಮಂಗಳವಾರ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳದಲ್ಲಿ ಪಾಲಿಕೆ ಅಧಿಕಾರಿಗಳು ಮೊಕ್ಕಾಂ ಹೂಡಿ ಬೆಂಕಿ ನಂದಿಸಲು ನಿರಂತರವಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಧಾರವಾಡ:
ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದಂತಾಗಿದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಯನಿರ್ವಹಣೆ.
ಇಲ್ಲಿನ ಹೊಸಯಲ್ಲಾಪುರ ಘನತ್ಯಾಜ್ಯ ವಿಲೇವಾರಿ ಘಟಕದ ಕಸದ ಗುಡ್ಡೆಗೆ ಎರಡ್ಮೂರು ದಿನಗಳಿಂದ ಹೊತ್ತಿಕೊಂಡ ಪರಿಣಾಮ ನಗರಾದ್ಯಂತ ಜನರು ವಿಷಕಾರಿ ಹೊಗೆಯಿಂದ ತತ್ತರಿಸಿದ್ದರು. ಇದನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಮಂಗಳವಾರ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳದಲ್ಲಿ ಪಾಲಿಕೆ ಅಧಿಕಾರಿಗಳು ಮೊಕ್ಕಾಂ ಹೂಡಿ ಬೆಂಕಿ ನಂದಿಸಲು ನಿರಂತರವಾಗಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪಾಲಿಕೆಯ ಹುಬ್ಬಳ್ಳಿ ಹಾಗೂ ಧಾರವಾಡದ ಎಲ್ಲ ಜೆಟ್ ವಾಹನ, ಅಗ್ನಿಶಾಮಕ ವಾಹನ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸಲಾಗುತ್ತಿದೆ. ಜೆಸಿಬಿ, ಹಿಟಾಚಿ ಬಳಸಿ ಕಸದ ಗುಡ್ಡೆ ಮೇಲೆ ವಾಹನ ಹೋಗಲು ದಾರಿ ಮಾಡಿಕೊಂಡು ಬೆಂಕಿ ಹೊತ್ತಿದ ಸ್ಥಳದಲ್ಲಿ ಮಣ್ಣು ಸುರಿಯಲಾಗುತ್ತಿದೆ. ನೀರು ಸಿಂಪರಿಸಿ ಬೆಂಕಿ ಆರಿಸುವ ಪ್ರಕ್ರಿಯೆ ನಡೆದಿದೆ.
ಮೇಯರ್ ಭೇಟಿ:
ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಜ್ಯೋತಿ ಪಾಟೀಲ್, ಬೆಂಕಿ ನಂದಿಸುವ ಕಾರ್ಯಾಚರಣೆ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪರಿಸ್ಥಿತಿ ಕೈ ಮೀರುವ ಹಂತ ತಲುಪಿದ್ದರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನೇತೃತ್ವವನ್ನು ಸ್ವತಃ ಪಾಲಿಕೆ ಆಯುಕ್ತರೇ ವಹಿಸಿಕೊಂಡಿದ್ದಾರೆ. ಈ ಘಟನೆಯಿಂದ ತೊಂದರೆ ಅನುಭವಿಸಿದ ಸ್ಥಳೀಯರು ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆಯಿತು. ಆಕ್ರೋಶಭರಿತರನ್ನು ಸಮಾಧಾನಗೊಳಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಸ್ಥಳದಲ್ಲಿಯೇ ಠಿಕಾಣಿ ಹೂಡಿ ತಜ್ಞರನ್ನು ಸ್ಥಳಕ್ಕೆ ಕರೆಯಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬೆಂಕಿಯು ಬುಧವಾರದ ಹೊತ್ತಿಗೆ ಹತೋಟಿಗೆ ಬರುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಸ್ಥಳೀಯರ ಆಕ್ರೋಶ:
ಎಲ್ಲ ಕಡೆಗೂ ದಟ್ಟ ಹೊಗೆ ಆವರಿಸಿದ್ದರಿಂದ ಕಂಗಾಲಾದ ಸ್ಥಳೀಯರು ಬುಧವಾರ ಬೆಳಗ್ಗೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗುತ್ತಿದ್ದ ಕಸ ತುಂಬಿದ ವಾಹನ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಈ ಸಮಸ್ಯೆ ಬಗೆಹರಿಯುವ ವರೆಗೆ ಇಲ್ಲಿ ತ್ಯಾಜ್ಯ ಬಿಡುವಂತಿಲ್ಲ ಎಂದು ಕಿಡಿಕಾರಿದರು. ಬೆಂಕಿ ಹೊತ್ತಿದ ತಕ್ಷಣವೇ ಈ ಬಗ್ಗೆ ಪಾಲಿಕೆ ವಲಯ ಕಚೇರಿಗೆ ಮಾಹಿತಿ ನೀಡಿದ್ದೇವೆ. ಆದರೆ, ಅಧಿಕಾರಿಗಳು ಸ್ಪಂದಿಸಲಿಲ್ಲ. ಈಗ ಬೆಂಕಿ ಪ್ರಮಾಣ ವ್ಯಾಪಿಸಿದೆ. ಹೀಗೇಕೆ ನಿರ್ಲಕ್ಷ್ಯ ಎಂದು ಅಧಿಕಾರಿಗಳ ವಿರುದ್ಧ ಜನ ಹರಿಹಾಯ್ದರು. ರಾಸಾಯನಿಕ ಕ್ರಿಯೆಯಿಂದ ಕಸದ ಗುಡ್ಡಕ್ಕೆ ಬೆಂಕಿ ಹತ್ತಿದೆ. ಬೆಂಕಿ ನಂದಿಸುವ ಕಾರ್ಯ ಭರದಿಂದ ಸಾಗಿದೆ. ಬಿಸಿಲು ಹಾಗೂ ಗಾಳಿಯ ಪ್ರಮಾಣ ಹೆಚ್ಚಿದ್ದು, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಪಾಲಿಕೆಯ ಎಲ್ಲ ಜೆಟ್ ವಾಹನ ಬಳಸುತ್ತಿದ್ದು, ಅಗ್ನಿಶಾಮಕ ವಾಹನಗಳು ಕೂಡ ಬಂದಿವೆ. ಬೆಂಕಿ ನಂದಿಸಲು ನೀರಿನ ಜೊತೆಗೆ ಮಣ್ಣು ಸಹ ಹಾಕಲಾಗುತ್ತಿದೆ. ಈಗ ತುಸು ಹೊಗೆ ಪ್ರಮಾಣ ಕಡಿಮೆಯಾಗಿದ್ದು, ಬುಧವಾರದೊಳಗೆ ಸಂಪೂರ್ಣ ಹತೋಟಿಗೆ ಬರಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.