ಕನ್ನಡಪ್ರಭ ವಾರ್ತೆ ಔರಾದ್
ಔರಾದ್‌ನಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ವಿರೋಧಿಸಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಚವ್ಹಾಣ್ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಸರ್ಕಾರ ಬಂದು ಒಂದು ವರ್ಷವಾಗಿದೆ. ಸರ್ಕಾರ ರೈತರು, ಬಡವರು, ಕೂಲಿ ಕಾರ್ಮಿಕರಿಗೆ ನೆರವಾಗುವ ಬದಲು ಸಂಕಷ್ಟಕ್ಕೆ ದೂಡುತ್ತಿದೆ. ಈಗಾಗಲೇ ಜನತೆ ಸಂಕಷ್ಟದಲ್ಲಿದ್ದಾರೆ. ಇಂಥಹದರಲ್ಲಿ ತೈಲ ಬೆಲೆ ಏರಿಕೆ ಮಾಡಿರುವುದು ಖಂಡನೀಯ. ಕಾಂಗ್ರೆಸ್ ಗ್ಯಾರಂಟಿ ಆಮೀಷಗಳನ್ನು ತೋರಿಸಿ ಜನರನ್ನು ಯಾಮಾರಿಸಿ ರಾಜ್ಯದಲ್ಲಿ ಅಧಿಕಾರ ಪಡೆದಿದೆ ಎಂದು ಆರೋಪಿಸಿದರು.ಯಾವ ಅಭಿವೃದ್ಧಿಯೂ ಇಲ್ಲದೇ ಸರ್ಕಾರದ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣವಿಲ್ಲ. ಶಾಸಕರಿಗೂ ಕೂಡ ಅನುದಾನ ಕೊಡುತ್ತಿಲ್ಲ. ಬಡವರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ರಾಜ್ಯದ ಮುಖ್ಯಮಂತ್ರಿ ಅಧಿಕಾರ ಬಂದ ಕೂಡಲೇ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಔರಾದ್ (ಬಿ) ಮಂಡಲ ಘಟಕದಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ, ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಖಂಡಿಸಿದರು. ಪಟ್ಟಣದ ಎಪಿಎಂಸಿ ಬಳಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ನಿರ್ಧಾರವನ್ನು ವಿರೋಧಿಸಲಾಯಿತು. ಶಾಸಕರು ಹಾಗೂ ಮುಖಂಡರು ಎತ್ತಿನ ಬಂಡಿ ಹತ್ತಿ ತೈಲ ಬೆಲೆ ಏರಿಕೆಯಿಂದ ರೈತರು ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಕೂಡಲೇ ತೈಲ ಬೆಲೆ ಏರಿಕೆ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಔರಾದ್ (ಬಿ) ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ವಸಂತ ಬಿರಾದಾರ, ಶಿವರಾಜ ಅಲ್ಮಾಜೆ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಬಸವರಾಜ ಪಾಟೀಲ್, ಶಿವಾಜಿರಾವ ಕಾಳೆ, ಅಶೋಕ ಅಲ್ಮಾಜೆ, ರಾಮರೆಡ್ಡಿ ಪಾಟೀಲ್, ಸಂತೋಷ ಪೋಕಲವಾರ, ಕೇರಬಾ ಪವಾರ್, ಸಂಜು ವಡೆಯರ್, ಬಸವರಾಜ ಹಳ್ಳೆ, ಖಂಡೋಬಾ ಕಂಗಟೆ, ರವೀಂದ್ರ ರೆಡ್ಡಿ, ಸಚಿನ್ ಬಿರಾದಾರ, ಸಚಿನ್ ರಾಠೋಡ, ಶ್ರೀನಿವಾಸ ಖೂಬಾ, ಸುಜಿತ ರಾಠೋಡ ಸೇರಿದಂತೆ ಇತರರಿದ್ದರು.