ಹೋರಾಟಗಳಿಂದ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯ

KannadaprabhaNewsNetwork |  
Published : Nov 06, 2024, 12:48 AM IST

ಸಾರಾಂಶ

ಶರಣ ಚಳವಳಿಯ ನಂತರ ಅತಿ ಹೆಚ್ಚು ಜನರ ಒಡನಾಟ ಹೊಂದಿದ್ದ ಚಳವಳಿ ಎಂದರೆ ಅದು ದಲಿತ ಸಂಘರ್ಷ ಸಮಿತಿಯ ಹೋರಾಟಗಳಾಗಿವೆ

ಕನ್ನಡಪ್ರಭ ವಾರ್ತೆ ತುಮಕೂರು

ಶರಣ ಚಳವಳಿಯ ನಂತರ ಅತಿ ಹೆಚ್ಚು ಜನರ ಒಡನಾಟ ಹೊಂದಿದ್ದ ಚಳವಳಿ ಎಂದರೆ ಅದು ದಲಿತ ಸಂಘರ್ಷ ಸಮಿತಿಯ ಹೋರಾಟಗಳಾಗಿವೆ. ಜನರ ನಡುವೆಯೇ ಇದ್ದ, ಅವರ ನೋವು, ನಲಿವುಗಳಿಗೆ ಧ್ವನಿಯಾಗಿದ್ದ ದಸಂಸ, ಇದನ್ನು ಕನ್ನಡ ವಿವಿಯ ಆಧ್ಯಯನ ವರದಿಗಳು ದೃಢಪಡಿಸಿವೆ ಎಂದು ಹಿರಿಯ ಗಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.

ನಗರದ ಪಾವನ ಆಸ್ಪತ್ರೆಯಲ್ಲಿ ಬಹಜನ ನಾಯಕ ಬೆಲ್ಲದಮಡು ರಂಗಸ್ವಾಮಿ ಅವರ 75ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಲಿತ ಚಳವಳಿಯ ಆರಂಭದಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ನಾಯಕರು ತಾಯ್ತತನದಿಂದ ಕೆಲಸ ಮಾಡಿದ್ದರು. ಹಾಗಾಗಿಯೇ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಾಯಿತು ಎಂದರು.

ದಸಂಸ ಮತ್ತು ನಮ್ಮದು 45 ವರ್ಷಗಳ ಒಡನಾಟ. ಹತ್ತನೇ ತರಗತಿ ಅನುತ್ತೀರ್ಣಗೊಂಡು ದನ ಕಾಯುವಾಗ ಸಮಯ ಕಳೆಯಲು ವಿವಿಧ ರೀತಿಯ ಗೀತೆಗಳನ್ನು ಹಾಡುತ್ತಿದ ನನ್ನನ್ನು ಹಿರಿಯರೊಬ್ಬರು ಕೋಟಗಾನಹಳ್ಳಿ ರಾಮಯ್ಯ ಬಳಿ ತಂದು ಬಿಟ್ಟರು, ಅಲ್ಲಿಂದ ಆರಂಭವಾದ ದಸಂಸ ಒಡನಾಟ ಇಂದಿಗೂ ಮುಂದುವರೆದಿದೆ. ನಾವು ಸದ್ಯ ಏನಾದರೂ ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ದಲಿತ ಸಂಘರ್ಷ ಸಮಿತಿ ಮತ್ತು ಅದರಲ್ಲಿದ್ದ ಬೆಲ್ಲದ ಮಡು ರಂಗಸ್ವಾಮಣ್ಣನ ರೀತಿಯ ತಾಯ್ತನದ ಮುಖಂಡರಗಳೇ ಸಹೃದಯವಂತರ ಸಹವಾಸ ಎಂದರು.

ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣದಾಸ್ ಮಾತನಾಡಿ, ನಾನು ಮತ್ತು ಬೆಲ್ಲದ ಮಡು ರಂಗಸ್ವಾಮಿ ಒಡನಾಡಿಗಳು, ಅವರು ಹೋರಾಟಗಾರರಾಗಿ ಗುರುತಿಸಿಕೊಂಡರೆ, ನಾನು ಕಲಾವಿದನಾದೆ. ಪುರಾಣ ಕಥೆಗಳಿಗೆ ಸಿಮೀತವಾಗಿದ್ದ ಹರಿಕಥಾ ಕ್ಷೇತ್ರದಲ್ಲಿ ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆ ಹೇಳುವ ಜನಕಥಾ ಕೀರ್ತನೆ ಸೃಜನೆಯ ಹಿಂದೆ ದಸಂಸದ ಸಂಗಾತಿಗಳ ಒಡನಾಡುವೂ ಕಾರಣ ಎಂದರು.

ಚಿಂತಕ ಕೆ.ದೊರೈರಾಜು ಮಾತನಾಡಿ, ದೇಶದಲ್ಲಿ ಜಾತಿಯತೆ, ಕೋಮು ಪ್ರಚೋದನೆ ಹೆಚ್ಚಲು, ಹಿರಿಯರು ನಮ್ಮ ಪರಂಪರೆ, ಸಂಸ್ಕೃತಿಯನ್ನು ಕಿರಿಯರಿಗೆ ತಿಳಿಸದೆ ಇರುವುದು. ದಸಂಸ ಹುಟ್ಟಿಗೆ ಕಾರಣ ಏನು ?, ಅದರ ಸಾಧನೆಗಳೇನು ? ಎಂಬುದನ್ನು ಯುವ ಪೀಳಿಗೆಗೆ ತಿಳಿಸುವ ಮೂಲಕ ಒಡೆದು ಆಳುವ ಸಂಸ್ಕೃತಿ ವಿರುದ್ದ ಯುವಕರಿಗೆ ವ್ಯವಸ್ಥಿತವಾಗಿ ಸಂಘಟಿಸಬೇಕಿದೆ ಎಂದರು.

ಈ ಜಗತ್ತು ಯಾವತ್ತು ಸರ್ವಾಧಿಕಾರಿಯನ್ನು ಬೆಳೆಯಲು ಬೆಳೆಯಲು ಬಿಟ್ಟಿಲ. ನಾನು, ನನ್ನದು ಎಂಬುದು ಬಹು ಕಾಲ ನಿಲ್ಲದು, ನಾವು, ನಮ್ಮದು ಎಂಬುದಕ್ಕೆ ಎಂದಿಗೂ ಮನ್ನಣೆ ಇದೆ. ಇದನ್ನು ಇತಿಹಾಸವೇ ತಿಳಿಸಿಕೊಟ್ಟಿದೆ. ನಾನು ಎಷ್ಟೇ ಆರೋಗ್ಯವಂತನಾಗಿದ್ದರೂ, ನನ್ನ ಸುತ್ತಮುತ್ತ ಕೊಳಕು ಇದ್ದರೆ, ನನ್ನನ್ನು ಒಂದು ದಿನ ಕೊಳೆಯುವಂತೆ ಮಾಡುತ್ತದೆ ಎಂಬ ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಕೆಲಸವನ್ನು ಇನ್ನೊಬ್ಬರು ಮುಂದುವರೆಸಿಕೊಂಡು ಹೋಗುವುದನ್ನು ನೋಡಿದಾಗ,ಅವರ ಇದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದು ಕೆ.ದೊರೆರಾಜು ನುಡಿದರು

ಪಾವನ ಆಸ್ಪತ್ರೆಯ ಮುಖ್ಯಸ್ಥ ಡಾ.ಮುರುಳೀಧರ ಬೆಲ್ಲದ ಮಡು ಮಾತನಾಡಿ, ಕರ್ಮಯೋಗಿ ಬೆಲ್ಲದ ಮಡು ರಂಗಸ್ವಾಮಿ ಅವರ ೭೫ನೇ ಜನ್ಮ ದಿನ. ಅವರ ನೆನಪಿನಲ್ಲಿ ಅವರ ಬದುಕು, ಹೋರಾಟ ಕುರಿತು ಪುಸ್ತಕವೊಂದನ್ನು ಹೊರತರುವ ಪ್ರಯತ್ನ ನಡೆದಿತ್ತು. ಅತಿಥಿಗಳ ದಿನಾಂಕ ಸರಿಹೊಂದದ ಕಾರಣ ಸಾಧ್ಯವಾಗಲಿಲ್ಲ. ಹಾಗಾಗಿ ಸಾಧಕರನ್ನು ಸನ್ಮಾನಿಸುವ ಕೆಲಸ ನಡೆದಿದೆ. ಸುಮಾರು 44 ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಿರುವ ಕರಾಟೆ ಕೃಷ್ಣಮೂರ್ತಿ, ಪತ್ರಕರ್ತರಾದ ಎಚ್.ವಿ.ವೆಂಕಟಾಚಲ ಹಾಗೂ ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ ಅವರುಗಳನ್ನು ಕರ್ಮಯೋಗಿ ಬೆಲ್ಲದ ಮಡು ರಂಗಸ್ವಾಮಿ ಟ್ರಸ್ಟ್ ವತಿಯಿಂದ ಅಭಿನಂದಿಸಲಾಗುತ್ತಿದೆ. ಅಲ್ಲದೆ ಟ್ರಸ್ಟ್ ವತಿಯಿಂದ ಹೆಲ್ತ್ ಕ್ಯಾಂಪ್ ಸೇರಿದಂತೆ ಹಲವು ಸಮಾಜ ಸೇವಾ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ ಎಂದರು.

ಅಭಿನಂದಿತರಾದ ಕರಾಟೆ ಕೃಷ್ಣಮೂರ್ತಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಎಚ್‌.ವಿ.ವೆಂಕಟಾಚಲ ಮಾತನಾಡಿದರು. ಡಾ.ಪಾವನ, ದಸಂಸ ಹಿರಿಯರಾದ ನರಸಿಂಹಯ್ಯ, ನರಸೀಯಪ್ಪ, ಸಿಐಟಿಯುನ ಸುಬ್ರಮಣ್ಯ, ಬಿ.ಉಮೇಶ್,ಬೆಲ್ಲದಮಡು ರಂಗಸ್ವಾಮಿ ಅವರ ಸಹೋದರರಾದ ಶಿವಣ್ಣ, ಕೃಷ್ಣಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ