
ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ 71ನೇ ಕನ್ನಡ ರಾಜ್ಯೋತ್ಸವದ ವೇಳೆ ಬಿಸಿಲಿನ ತಾಪಕ್ಕೆ ಎನ್‌ಸಿಸಿ ವಿದ್ಯಾರ್ಥಿಯೊಬ್ಬರು ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆದಿದೆ.ನಗರದ ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಪ್ರಣವ್ ಅಸ್ವಸ್ಥಗೊಂಡ ವಿದ್ಯಾರ್ಥಿ. ಕನ್ನಡ ರಾಜ್ಯೋತ್ಸವದ ಅಂಗ ವಾಗಿ ಮೈದಾನದಲ್ಲಿ ನಡೆಯುತ್ತಿದ್ದ ಪಥಸಂಚಲನದಲ್ಲಿ ಎನ್‌ಸಿಸಿ ತಂಡದೊಂದಿಗೆ ಭಾಗವಹಿಸಿದ್ದ ವೇಳೆ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ತಲೆಸುತ್ತು ಬಂದು ಏಕಾಏಕಿ ಕುಸಿದು ಬಿದ್ದಿದ್ದಾರೆ.ವಿದ್ಯಾರ್ಥಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಗಮನಿಸಿದ ಸ್ಥಳದಲ್ಲಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ತಕ್ಷಣ ನೆರವಿಗೆ ಧಾವಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಜಯಕುಮಾರ್ ಸಮಯಪ್ರಜ್ಞೆ ಮೆರೆದು ವಿದ್ಯಾರ್ಥಿಗೆ ತಕ್ಷಣ ಅಗತ್ಯ ನೆರವು ಕಲ್ಪಿಸುವಂತೆ ಕ್ರಮ ಕೈಗೊಂಡರು. ಬಳಿಕ ಅಸ್ವಸ್ಥ ವಿದ್ಯಾರ್ಥಿ ಪ್ರಣವ್ ರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಯಿತು.ರಾಜ್ಯೋತ್ಸವದ ಸಂಭ್ರಮದ ನಡುವೆ ವಿದ್ಯಾರ್ಥಿ ಅಸ್ವಸ್ಥಗೊಂಡ ಘಟನೆ ಕೆಲಕಾಲ ಆತಂಕ ಮೂಡಿಸಿತು.