ಬೀದರ್ ಸಾಯಿಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಯದ್ದಕ್ಕೆ ಸಿಇಟಿಯೇ ಇಲ್ಲ !

KannadaprabhaNewsNetwork | Updated : Apr 18 2025, 06:38 AM IST

ಸಾರಾಂಶ

ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.  

 ಬೀದರ್‌/ಶಿವಮೊಗ್ಗ : ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಬೀದರ್ ಸಾಯಿಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲೊಪ್ಪದೆ ಸಿಇಟಿ ಗಣಿತ ಪರೀಕ್ಷೆಯಿಂದಲೇ ಹೊರಗುಳಿದಿದ್ದು, ಆತನ ಎಂಜಿನಿಯರಿಂಗ್‌ ಕನಸು ಭಗ್ನಗೊಂಡಿದೆ. ಶಿವಮೊಗ್ಗದಲ್ಲಿ ಜನಿವಾರ ತೆಗೆಸಿದ್ದಕ್ಕೆ ಬ್ರಾಹ್ಮಣ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿವೆ.

ಬೀದರ್‌ನಲ್ಲಿ ಬುಧವಾರ ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ವೇಳೆ ಜನಿವಾರ ಹಾಕಿಕೊಂಡು ಪರೀಕ್ಷೆಗೆ ಹಾಜರಾಗಲು ಅನುಮತಿಸಿದ್ದ ಅಧಿಕಾರಿಗಳು, ಗುರುವಾರ ಗಣಿತ ಪರೀಕ್ಷೆ ವೇಳೆ ಆಕ್ಷೇಪಿಸಿದ್ದಾರೆ. ಬೆಳಗ್ಗೆ 10ಕ್ಕೆ ಪರೀಕ್ಷಾ ಕೇಂದ್ರದ ಹೊರಗಡೆ ತಪಾಸಣೆ ಸಂದರ್ಭದಲ್ಲಿ ಜನಿವಾರ ತೆಗೆದು ಹಾಕಿ ಅಥವಾ ಕತ್ತರಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಕೆಲಸ ನಿಮಿತ್ತ ಪೋಷಕರು ಪರೀಕ್ಷಾ ಕೇಂದ್ರದ ಹತ್ತಿರ ಬಂದಿರಲಿಲ್ಲ. ಹೀಗಾಗಿ ವಿದ್ಯಾರ್ಥಿಯು ದೂರವಾಣಿ ಮೂಲಕ ಪಾಲಕರನ್ನು ಸಂಪರ್ಕಿಸಿದಾಗ ಜನಿವಾರ ತೆಗೆಯಲಾಗದು ಎಂದಿದ್ದಾರೆ. ಈ ವಿಷಯವನ್ನು ವಿದ್ಯಾರ್ಥಿ ಅಧಿಕಾರಿಗಳಿಗೆ ತಿಳಿಸಿ ಅಂಗಲಾಚಿ ಬೇಡಿದರೂ ಪರೀಕ್ಷೆಗೆ ಹಾಜರಾಗಲು ಅನುಮತಿಸಿಲ್ಲ. ಹೀಗಾಗಿ ಆ ವಿದ್ಯಾರ್ಥಿ ಪರೀಕ್ಷೆಯಿಂದಲೇ ಹೊರಗುಳಿದಿದ್ದಾನೆ. ಆದರೆ ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ಬರೆಯಲು ಆತನಿಗೆ ಅನುಮತಿಸಿದ್ದಾರೆ!

ವಿದ್ಯಾರ್ಥಿ ‘ಇದೆಂಥ ನ್ಯಾಯ.. ಸರ್‌?’ ಎಂದು ಕೇಳಿದಾಗ ಅಧಿಕಾರಿಗಳು, ‘ಅದನ್ನು ಬಳಸಿ ನೀನು ಪರೀಕ್ಷಾ ಕೇಂದ್ರದಲ್ಲಿ ನೇಣು ಹಾಕಿಕೊಂಡರೆ ಹೇಗೆ?’ ಎಂದು ಪ್ರಶ್ನಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜನಿವಾರ ಕಾರಣಕ್ಕೆ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಗಣಿತ ಪರೀಕ್ಷೆ ಬರೆಯಲು ಅನುಮತಿಸದ ಅಧಿಕಾರಿಗಳಿಂದಾಗಿ ಎಂಜಿನಿಯರಿಂಗ್ ಮಾಡುವ ಆಸೆ ನುಚ್ಚು ನೂರಾಗಿದೆ. ನನ್ನ ಭವಿಷ್ಯದ ಮೇಲೆ ಕರಿನೆರಳು ಹಾಸಿದವರ ವಿರುದ್ಧ ಕ್ರಮವಾಗಲಿ. ನನಗೆ ನ್ಯಾಯ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಪಾಲಕರು ಪ್ರತಿಕ್ರಿಯಿಸಿ, ನನ್ನ ಮಗನ ಭವಿಷ್ಯ ಕಗ್ಗತ್ತಲಿಗೆ ನೂಕಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜನಿವಾರ ಕತ್ತರಿಸಿದ ಅಧಿಕಾರಿಗಳು:

ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿ ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಸಿಬ್ಬಂದಿ ಕತ್ತರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬ್ರಾಹ್ಮಣ ಸಮಾಜದ ಮುಖಂಡರಾದ ಕೆ.ಬಿ. ಪ್ರಸನ್ನಕುಮಾರ್, ಎಸ್. ದತ್ತಾತ್ರಿ, ಎಂ.ಶಂಕರ್ ಮುಂತಾದವರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದವರನ್ನು ತರಾಟೆಗೆ ತೆಗೆದುಕೊಂಡರು. ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲೆಯ ವಿವಿಧ ಬ್ರಾಹ್ಮಣ ಸಂಘಗಳ ಒಕ್ಕೂಟದ ಪ್ರಮುಖರು ಘಟನೆಯನ್ನು ಖಂಡಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು. ಪರೀಕ್ಷಾ ಕೇಂದ್ರದ ಸಿಬ್ಬಂದಿ ಆಕ್ಷೇಪಾರ್ಹ ಕ್ರಮ ಕೈಗೊಂಡಿದ್ದರೆ ಸೂಕ್ತ ಕ್ರಮ ಜರುಗಿಸುವುದಾಗಿ ಗುರುದತ್ತ ಹೆಗಡೆ ಭರವಸೆ ನೀಡಿದರು. 

Share this article