ಗ್ರಾಪಂ ಕಚೇರಿ ಮುಂದೆ 5 ತಾಸು ಧರಣಿ ಕುಳಿತ ವಿದ್ಯಾರ್ಥಿನಿ

KannadaprabhaNewsNetwork |  
Published : Aug 23, 2025, 02:00 AM IST
22ಕೆಡಿವಿಜಿ4, 5, 6, 7, 8, 9-ದಾವಣಗೆರೆ ತಾ. ಆಲೂರು ಗ್ರಾಪಂ ಕಚೇರಿ ಎದುರು 6ನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ ಏಕಾಂಗಿಯಾಗಿ ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ಕುಡಿಯುವ ನೀರೊದಗಿಸದ, ಒಳಚರಂಡಿ ವ್ಯವಸ್ಥೆ ಕಲ್ಪಿಸದ, ಊರಿನ ರಸ್ತೆ ಅಭಿವೃದ್ಧಿಪಡಿಸದ ಗ್ರಾಮ ಪಂಚಾಯಿತಿ ಆಡಳಿತದ ಅಸಡ್ಡೆ ವಿರುದ್ಧ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತಾಲೂಕಿನ ಆಲೂರು ಗ್ರಾಮದಲ್ಲಿ ಸಿಡಿದೆದ್ದಿದ್ದಾರೆ. ಕುರ್ಚಿಗೆ ತನ್ನ ಬೇಡಿಕೆಗಳ ಬ್ಯಾನರ್ ಹಾಕಿಕೊಂಡು, ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾವಚಿತ್ರದ ಸಮೇತ ಏಕಾಂಗಿಯಾಗಿ ಪ್ರತಿಭಟಿಸಿ, ಗ್ರಾಪಂ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾಳೆ.

- ಹೋರಾಟ ಮೂಲಕ ಗ್ರಾಪಂ ಅಧಿಕಾರಿಗಳ ಚಳಿ ಬಿಡಿಸಿದ ಸುಶ್ಮಿತಾ ।

- ರಸ್ತೆ ದುರಸ್ತಿಗೆ ದೌಡಾಯಿಸಿದ ಜೆಸಿಬಿ ಯಂತ್ರದಿಂದ ಕಾಮಗಾರಿ ಶುರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕುಡಿಯುವ ನೀರೊದಗಿಸದ, ಒಳಚರಂಡಿ ವ್ಯವಸ್ಥೆ ಕಲ್ಪಿಸದ, ಊರಿನ ರಸ್ತೆ ಅಭಿವೃದ್ಧಿಪಡಿಸದ ಗ್ರಾಮ ಪಂಚಾಯಿತಿ ಆಡಳಿತದ ಅಸಡ್ಡೆ ವಿರುದ್ಧ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತಾಲೂಕಿನ ಆಲೂರು ಗ್ರಾಮದಲ್ಲಿ ಸಿಡಿದೆದ್ದಿದ್ದಾರೆ. ಕುರ್ಚಿಗೆ ತನ್ನ ಬೇಡಿಕೆಗಳ ಬ್ಯಾನರ್ ಹಾಕಿಕೊಂಡು, ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾವಚಿತ್ರದ ಸಮೇತ ಏಕಾಂಗಿಯಾಗಿ ಪ್ರತಿಭಟಿಸಿ, ಗ್ರಾಪಂ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾಳೆ.

ಆಲೂರು ಗ್ರಾಮದ ಗ್ರಾಪಂ ಕಚೇರಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕ, ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ, ರಸ್ತೆ ದುರಸ್ತಿಪಡಿಸುವಂತೆ ಸಾಕಷ್ಟು ಸಲ ಒತ್ತಾಯಿಸಿದ್ದರು. ಆದರೆ, ಪಂಚಾಯಿತಿ ಆಡಳಿತ ಯಂತ್ರ ಕಿವಿಗೊಡಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ ಸಹ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನಿರ್ಲಕ್ಷಿಸಿದ್ದರಿಂದ ರೋಸಿಹೋದ ಬಾಲಕಿ ಸುಶ್ಮಿತಾ ಏಕಾಂಗಿಯಾಗಿ ಪ್ರತಿಭಟಿಸಿ, ಗ್ರಾಮಸ್ಥರ ಕಣ್ಣು ತೆರೆಸಿದ್ದಾಳೆ.

ಗ್ರಾಮದ ಶ್ರೀ ದೇವರಾಜ ಅರಸು ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಪಿ.ಬಿ.ಸುಶ್ಮಿತಾ ಧರಣಿ ಕುಳಿತಿರುವುದು ಗ್ರಾಮಸ್ಥರ ಹುಬ್ಬೇರಿಸಿದೆ. ತನ್ನ ಮನೆ, ಕೇರಿ, ಊರಿನ ಜನರ ಸಮಸ್ಯೆಗೆ ಧ್ವನಿಯೆತ್ತಿರುವುದು ಎಲ್ಲರಿಂದ ಪ್ರಶಂಸೆಗೆ ಕಾರಣವಾಗಿದೆ. ಗ್ರಾಪಂ ಕಚೇರಿ ಎದುರು ವಿದ್ಯಾರ್ಥಿನಿ ಸುಶ್ಮಿತಾ ಕುರ್ಚಿಯೊಂದಕ್ಕೆ ಬೇಡಿಕೆಗಳ ಸಮೇತ ಮಹಾತ್ಮ ಗಾಂಧಿ ಭಾವಚಿತ್ರ ಇಟ್ಟುಕೊಂಡು ಐದೂವರೆ ತಾಸು ಧರಣಿ ಕುಳಿತಿದ್ದು ತಿಳಿದು ಕುಂಭಕರ್ಣ ನಿದ್ದೆಯಲ್ಲಿದ್ದ ಗ್ರಾಪಂ ಆಡಳಿತ ಎಚ್ಚೆತ್ತಿದೆ. ತರಾತುರಿಯಲ್ಲಿ ಜೆಸಿಬಿ ಯಂತ್ರ ತರಿಸಿ, ರಸ್ತೆ ಕಾಮಗಾರಿಗೆ ಮುಂದಾಗಿದೆ.

ಗ್ರಾಪಂ ಆಡಳಿತ ನಡೆ ಕಂಡು ಗ್ರಾಮಸ್ಥರು ಸಹ ಕ್ಷಣ ಅವಕ್ಕಾದರು. ನಾವು ಇಷ್ಟೆಲ್ಲಾ ಕಾಡಿ, ಬೇಡಿ, ಮನವಿ ಮಾಡಿದರೂ ಸೌಕರ್ಯ ಕಲ್ಪಿಸಲು ಸ್ಪಂದಿಸದ ಗ್ರಾಪಂನವರು ಪುಟ್ಟಮಗಳು ನಡೆಸಿದ ಧರಣಿಗೆ ಭಯಗೊಂಡು ಅಭಿವೃದ್ಧಿ ಕಾಮಗಾರಿಗೆ ಮುಂದಾಗಿದ್ದಾರೆ, ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು ಎಂದು ಮಾತಾಡಿಕೊಳ್ಳುವಂತಾತಿದೆ.

ಮೂಲ ಸೌಕರ್ಯಕ್ಕಾಗಿ ಹೋರಾಟ ಘೋಷವಾಕ್ಯದೊಂದಿಗೆ ಸುಶ್ಮಿತಾ ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕ ರಸ್ತೆ ದುರಸ್ತಿಪಡಿಸುವಂತೆ ಧರಣಿ ಮೂಲಕ ಚಾಟಿ ಬೀಸಿದ್ದಾಳೆ. ಗ್ರಾಪಂ ಸ್ಪಂದನೆ ಎಂಬುದು ಬಾಲಕಿ ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ. ರಸ್ತೆ ದುರಸ್ತಿಪಡಿಸಲು ಜೆಸಿಬಿ ಯಂತ್ರ ಬಂದಿದ್ದು, ಮಣ್ಣು ಅಗೆವ ಕಾರ್ಯ ಶುರುವಾಗಿದೆ. ಗ್ರಾಪಂ ಪಿಡಿಒ, ಸಿಬ್ಬಂದಿ ಎಷ್ಟೇ ಮನವಿ ಮಾಡಿದರೂ ಬಾಲಕಿ ಸುಶ್ಮಿತಾ ಐದೂವರೆ ಗಂಟೆ ಕಾಲ ಏಕಾಂಗಿ ಹೋರಾಟ ನಡೆಸಿದ್ದಾಳೆ. ಬಾಲಕಿಯ ನಡೆ ಗ್ರಾಪಂ ಅಧಿಕಾರಿ, ಸಿಬ್ಬಂದಿಗೆ ಚಳಿ ಬಿಡಿಸಿದಂತಾಗಿದೆ.

ಬಾಲಕಿಯೊಬ್ಬಳು ಶುದ್ಧ ಕುಡಿಯುವ ನೀರಿನ ಘಟಕ, ಒಳಚರಂಡಿ ವ್ಯವಸ್ಥೆ ಹಾಗೂ ರಸ್ತೆ ದುರಸ್ತಿಗೆ ಒತ್ತಾಯಿಸಿ ಗ್ರಾಪಂ ಕಚೇರಿ ಎದುರು ಗಂಟೆಗಳ ಕಾಲ ಧರಣಿ ನಡೆಸುತ್ತಿದ್ದಾಳೆಂಬ ವಿಚಾರ ಮಾಧ್ಯಮಗಳು, ಸೋಷಿಯಲ್ ಮೀಡಿಯಾಗಳಿಗೂ ತಲುಪಿ, ವಿಷಯ ವೈರಲ್‌ ಆಗಿವೆ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಶುರು ಮಾಡುವುದಾಗಿ ಭರವಸೆ ನೀಡಿ, ಕಾಮಗಾರಿ ಆರಂಭಿಸಿದ್ದಾರೆ.

ಗ್ರಾಪಂ ಪಿಡಿಓ ನಿಂಗಪ್ಪ ಮಾತನಾಡಿ, ಈಗಾಗಲೇ ಒಳ ಚರಂಡಿ ದುರಸ್ಥಿ ಕಾಮಗಾರಿ ಶುರು ಮಾಡಿದ್ದೇವೆ. ರಸ್ತೆ ದುರಸ್ಥಿ ಕಾರ್ಯಕ್ಕೂ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

- - -

(ಬಾಕ್ಸ್‌) * ಹೋರಾಟಗಾರ್ತಿ ಸುಶ್ಮಿತಾ ಹೇಳೋದೇನು? ವಿದ್ಯಾರ್ಥಿನಿ ಸುಶ್ಮಿತಾ ಈ ಸಂದರ್ಭ ಮಾತನಾಡಿ, ನಮ್ಮ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗಾಲ ಬೇರೆ. ರಸ್ತೆ ಕೆಸರು, ನೀರು ಗುಂಡಿಗಳಿಂದ ಕೂಡಿದೆ. ನಾವು ಶಾಲೆಗೆ ಹೋಗಿ, ಬರುವುದೇ ಕಷ್ಟವಾಗುತ್ತಿದೆ. ಕೇವಲ ನಾವಷ್ಟೇ ಅಲ್ಲ, ನಮ್ಮ ಮೇಷ್ಟ್ರು ಸಹ ರಸ್ತೆಯಿಂದ ದಾಟುವ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಹಾಗಾಗಿ ಶೀಘ್ರ ರಸ್ತೆ ದುರಸ್ತಿ ಮಾಡಬೇಕು. ಅಲ್ಲದೇ, ಶುದ್ಧ ಕುಡಿಯವ ನೀರಿನ ಘಟಕ ಸ್ಥಾಪಿಸುವಂತೆ ಹಾಗೂ ರಸ್ತೆ ನಿರ್ಮಿಸುವಂತೆ ಹೋರಾಟ ನಡೆಸಿದ್ದೇನೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ಮುಂದುವರಿಸುತ್ತೇನೆ ಎಂದರು.

- - -

ಕ್ಯಾಪ್ಷನ್

22ಕೆಡಿವಿಜಿ4:

ದಾವಣಗೆರೆ ತಾಲೂಕಿನ ಆಲೂರು ಗ್ರಾಪಂ ಕಚೇರಿ ಎದುರು 6ನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ ಏಕಾಂಗಿಯಾಗಿ ಪ್ರತಿಭಟಿಸುತ್ತಿರುವುದು.

PREV

Recommended Stories

ಮೈಸೂರು ಸ್ಯಾಂಡಲ್‌ ಸೋಪಿನ ಜಾಹೀರಾತಿಗೆ ₹48.88 ಕೋಟಿ
ವರದಾ-ಬೇಡ್ತಿ ನದಿ ಜೋಡಣೆ ಕೇಂದ್ರದ ಒಪ್ಪಿಗೆ: ಬೊಮ್ಮಾಯಿ