ಹುಬ್ಬಳ್ಳಿ: ಜ್ಞಾನಾರ್ಜನೆಗೆ ನಿರಂತರ ಕಲಿಕೆ ಅಗತ್ಯವಾಗಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮರುಳಾಗದೇ ವಿದ್ಯಾರ್ಥಿಗಳು ಸುಸಂಸ್ಕೃತರಾಗಬೇಕು ಎಂದು ಗದಗ ಮತ್ತು ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು.
ಕಲಿಕೆಯು ನಿಂತ ನೀರಲ್ಲ, ಅದು ಹರಿಯುವ ನೀರಾಗಬೇಕು. ಪಠ್ಯ ಪುಸ್ತಕಗಳ ಜತೆಗೆ ಆದರ್ಶ ವ್ಯಕ್ತಿಗಳಾದ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಮತ್ತಿತರ ಮಹನೀಯರ ಪುಸ್ತಕಗಳನ್ನು ಓದಬೇಕು. ಅವರ ಜೀವನ ಚರಿತ್ರೆ-ಸಾಧನೆಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಏನನ್ನು ಓದಬೇಕು? ಏನನ್ನು ಓದಬಾರದು? ಏನನ್ನು ನೋಡಬೇಕು? ಏನನ್ನು ನೋಡಬಾರದು? ಏನನ್ನು ಕೇಳಬೇಕು? ಏನನ್ನು ಕೇಳಬಾರದು? ಎಂಬ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಒಟ್ಟಾರೆ ಜ್ಞಾನವನ್ನು ಮೇಲ್ಮಟ್ಟಕ್ಕೆ ಏರಿಸಿಕೊಳ್ಳುವುದೇ ನಿಜವಾದ ವಿದ್ಯಾರ್ಥಿ ಸಂಸೃತಿ ಎಂದರು.ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಮತ್ತು ಜ್ಞಾನದ ದಾಹ ಇರಬೇಕು. ಆಲದ ಮರದ ಬೀಜ ಸಾಸಿವೆಗಿಂತ ಚಿಕ್ಕದು. ಆದರೆ, ಆಲದ ಮರ ಬೆಟ್ಟದಷ್ಟು ಬೆಳೆಯುತ್ತದೆ. ಇಂತಹ ಗುರಿ ಹೊಂದಿದಾಗ ಮಾತ್ರ ಸಾಧನೆಗೆ ದಾರಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಪ್ರಾಣಿಶಾಸ್ತ್ರ ಉಪನ್ಯಾಸಕಿ ಸೌಮ್ಯಾ ಬಣವಿ, ಕಾಲೇಜು ಒಕ್ಕೂಟದ ಅಧ್ಯಕ್ಷೆ ಮತ್ತು ಮನೋಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ಹಾನಗಲ್, ವಿದ್ಯಾರ್ಥಿನಿ ಸಂಜನಾ ಮೊಕಾಶಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಲೆಫ್ಟಿನಂಟ್ ಸಿ.ಕೆ. ಪಾಟೀಲ, ಕಾಲೇಜು ಒಕ್ಕೂಟದ ಕಾರ್ಯದರ್ಶಿ ಅಜಯ್ ಹರಿಜನ, ಇಂಗ್ಲಿಷ್ ಉಪನ್ಯಾಸಕ ವೈ. ದೇವದತ್ತ, ಜಿಮಖಾನಾ ಕಾರ್ಯದರ್ಶಿ ತೇಜಸ್ವಿನಿ ಬೆಲ್ಲದ ಸೇರಿದಂತೆ ಹಲವರಿದ್ದರು.