ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಮರುವನಹಳ್ಳಿ ಗ್ರಾಮದ ಸೋಮಶೇಖರ್ ಹಾಗೂ ಮಣಿ ದಂಪತಿ ಪುತ್ರ ಕಿರಣ್ (೧೪) ಮೃತ ದುರ್ದೈವಿ. ದಾಸಾಪುರದ ನಿರ್ಮಲ ವಿದ್ಯಾ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಸ್ನೇಹಿತರಾದ ಹೇಮಂತ್ ಹಾಗೂ ಹರ್ಷಿತ್ ಜೊತೆಗೆ ಈಜಲು ಊರ ಹೊರವಲಯದಲ್ಲಿರುವ ಕಟ್ಟೆಗೆ ತೆರಳಿದ್ದ. ಮೂವರಿಗೂ ಪರಿಪೂರ್ಣ ಈಜು ಬರುತ್ತಿರಲಿಲ್ಲ. ಕಟ್ಟೆ ಪಕ್ಕದಲ್ಲೇ ಆಟವಾಡುತ್ತಾ ಇದ್ದ ಎಲ್ಲರೂ ಗುಂಡಿಯ ಆಳ ತಿಳಿಯದೆ ಮುಂದಕ್ಕೆ ಸಾಗಿದ್ದಾರೆ. ನಂತರ ವಾಪಸ್ ಬರಲು ಸಾಧ್ಯವಾಗದೆ ಪರದಾಡಿದ್ದಾರೆ.
ಹರ್ಷಿತ್ ಕಷ್ಟಪಟ್ಟು ದಡ ತಲುಪಿದ್ದಾನೆ. ಹೇಮಂತ್ ಮತ್ತು ಕಿರಣ್ ಒಬ್ಬರಿಗೊಬ್ಬರು ತಳ್ಳುತ್ತಾ ದಡದ ಕಡೆಗೆ ಬರಲು ಪ್ರಯತ್ನಿಸಿದ್ದರು. ಮೃತ ಕಿರಣ್ ಜೋರಾಗಿ ತಳ್ಳಿದ್ದರಿಂದ ಹೇಮಂತ್ ದಡ ತಲುಪಿದ. ಅಷ್ಟರಲ್ಲಿ ಸುಸ್ತಾಗಿದ್ದ ಕಿರಣ್ ಬರಲಾಗದೇ ನೀರಿನಲ್ಲಿ ಮುಳುಗಿದ ಎಂದು ಸ್ನೇಹಿತರು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತರಬೇತುದಾರರು ಮೃತದೇಹಕ್ಕಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.