ತಂದೆಯ ಸಾವಿನ ನೋವಿನ ಮಧ್ಯೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

KannadaprabhaNewsNetwork | Published : Mar 22, 2025 2:03 AM

ಸಾರಾಂಶ

ಗುರುವಾರ ರಾತ್ರಿ ವಿದ್ಯಾರ್ಥಿನಿ ಶಬನಾ ಅವರ ತಂದೆ ಮೃತಪಟ್ಟಿದ್ದರು. ಈ ಹಿನ್ನೆಲೆ ಶುಕ್ರವಾರ ನಡೆಯಬೇಕಿದ್ದ ಪರೀಕ್ಷೆಗೆ ವಿದ್ಯಾರ್ಥಿನಿ ಗೈರು ಹಾಜರಾಗುತ್ತಿರುವ ವಿಷಯ ತಿಳಿದ ಶಿಕ್ಷಕರು, ಅಧಿಕಾರಿಗಳು ಕುಟುಂಬದವರ ಮನವೊಲಿಸಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ.

ನವಲಗುಂದ: ತಂದೆಯ ಸಾವಿನ ದುಃಖದ ನಡುವೆಯೂ ಶಾಲಾ ವಿದ್ಯಾರ್ಥಿನಿಯೋರ್ವಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲಾ ವಿದ್ಯಾರ್ಥಿನಿ ಶಬನಾ ನೂರಹಸನ್ ಪಟಾಸು ಮಾಡಲ್ ಹೈಸ್ಕೂಲ್‌ನಲ್ಲಿರುವ ಎಸ್‌ಎಸ್ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿ.

ಘಟನೆ ವಿವರ:

ಗುರುವಾರ ರಾತ್ರಿ ವಿದ್ಯಾರ್ಥಿನಿ ಶಬನಾ ಅವರ ತಂದೆ ಮೃತಪಟ್ಟಿದ್ದರು. ಈ ಹಿನ್ನೆಲೆ ಶುಕ್ರವಾರ ನಡೆಯಬೇಕಿದ್ದ ಪರೀಕ್ಷೆಗೆ ವಿದ್ಯಾರ್ಥಿನಿ ಗೈರು ಹಾಜರಾಗುತ್ತಿರುವ ವಿಷಯ ತಿಳಿದ ಶಾಲಾ ಮುಖ್ಯೋಪಾಧ್ಯಾಯ ಆನಂದ ಭೋವಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಮಲ್ಲಾಡ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಖಾಜೇಸಾಬ ಹಂಚಿನಾಳ ಮುಲ್ಲಾ ಗಮನಕ್ಕೆ ತಂದಿದ್ದಾರೆ.

ಈ ಸಂಬಂಧ ಶಿಕ್ಷಣಾಧಿಕಾರಿಗಳು ಮುಖ್ಯೋಪಾಧ್ಯಾಯರಿಗೆ ಮತ್ತು ಕೆಲ ಶಿಕ್ಷಕರಿಗೆ ವಿದ್ಯಾರ್ಥಿನಿಯ ಮನೆಗೆ ತೆರಳುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿನಿಯ ಮನೆಗೆ ತೆರಳಿದ ಶಿಕ್ಷಕರು, ವಿದ್ಯಾರ್ಥಿನಿಯ ಮನವೊಲಿಸಿ, ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಕೋರಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಗೆ ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ವರೆಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ಶಬನಾ ಸ್ವಲ್ಪ ಅನಾರೋಗ್ಯದಿಂದ ಇದ್ದ ನಮ್ಮ ತಂದೆ ಮತ್ತು ನಾನು ಗುರುವಾರ ತುಂಬಾ ಹೊತ್ತು ಮಾತನಾಡಿದ್ದೆವು. ಬಳಿಕ ನನ್ನ ತಂದೆ ನಿನಗೆ ನಾಳೆ ಪರೀಕ್ಷೆ ಇದೆ ನೀನು ಸ್ವಲ್ಪ ಓದಿಕೊ ಎಂದು ಹೇಳಿದರು. ಅಷ್ಟೇ ಅಲ್ಲದೆ ಪರೀಕ್ಷೆ ವೇಳೆಗೆ ನನ್ನನ್ನು ಶಾಲೆಗೆ ಬಿಡುವುದಾಗಿಯೂ ಹೇಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಂದೆಗೆ ಹೊಟ್ಟೆನೋವು ಕಾಣಿಸಿಕೊಂಡು ಅರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯವ ವೇಳೆ ನಿಧನರಾಗಿದ್ದಾರೆ. ತಂದೆಯ ಪ್ರೇರಣೆಯಿಂದ ನಾನು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದೇನೆ ಎಂದಳು.

ತಂದೆ ಮೃತಪಟ್ಟಿರುವುದರಿಂದ ಬಾಲಕಿಯೋರ್ವಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರು ಹಾಜರಾಗುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರಿಗೆ ವಿದ್ಯಾರ್ಥಿನಿಯ ಮನೆಗೆ ಹೋಗಿ ಮನವೊಲಿಸಿ ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಮಾಡಲಾಗಿದೆ ಎಂದು ನವಲಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಬಿ. ಮಲ್ಲಾಡ ತಿಳಿಸಿದ್ದಾರೆ.

Share this article