-ಭಾರತೀಯ ವಿಜ್ಞಾನ ಕೇಂದ್ರದ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಭೇಟಿ
------ಕನ್ನಡಪ್ರಭವಾರ್ತೆ ನಾಯಕನಹಟ್ಟಿ
ವಿದ್ಯಾರ್ಥಿಗಳು ವಿಜ್ಞಾನಿಯಾಗಲು ದೃಢ ನಿರ್ಧಾರ ಮತ್ತು ಆತ್ಮವಿಶ್ವಾಸ ಅಗತ್ಯ ಎಂದು ನೊಬೆಲ್ ಪುರಸ್ಕೃತ ಭಾರತೀಯ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಹೇಳಿದರು.ನಾಯಕನಹಟ್ಟಿ ಸಮೀಪದ ಭಾರತೀಯ ವಿಜ್ಞಾನ ಕೇಂದ್ರದ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿ ಜಿಲ್ಲೆಯ ನಾನಾ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪ್ರಯೋಗ ವಿಫಲವಾದಾಗ ಚಿಂತಿಸದೆ ಪುನರ್ ಪ್ರಯೋಗದಲ್ಲಿ ತೊಡಗಬೇಕು. ಆಸಕ್ತಿ ಮತ್ತು ದೃಢ ಮನೋಸ್ಥಿತಿ ಅಧ್ಯಯನಕ್ಕೆ ಅವಶ್ಯಕ. 100 ವರ್ಷಗಳ ಹಿಂದೆ ಮಾಹಿತಿ ಸಂಗ್ರಹಿಸಿಡಲು ಸಾಧನಗಳನ್ನು ಕಂಡು ಹಿಡಿಯಬಹುದು ಎನ್ನುವ ಕಲ್ಪನೆ ಇರಲಿಲ್ಲ. ಇದೀಗ ಅಪಾರ ಪ್ರಮಾಣದ ಮಾಹಿತಿ ಸಂಗ್ರಹ ಸಾಧ್ಯವಿದೆ. ವಿಜ್ಞಾನಿಗಳು ಸಂಶೋಧನೆಗಳನ್ನು ಕಡ್ಡಾಯ ಪ್ರಕಟ ಮಾಡಬೇಕು. ಹೊಸ ಅನ್ವೇಷಣೆ ಅಥವ ಸಿದ್ದಾಂತವನ್ನು ಹೊರಜಗತ್ತು ಪರೀಕ್ಷಿಸಬೇಕು. ಈ ಬಗ್ಗೆ ಇರುವ ಲೋಪದೋಷಗಳನ್ನು ಸರಿಪಡಿಸಲು ಇದು ಸಹಾಯಕ.ಕೆಲವೆ ಜನರಿಗೆ ಮಾತ್ರ ಸೀಮಿತವಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಪಡೆಯಲು ಅರ್ಹತೆ, ಪ್ರತಿಭೆ ಮತ್ತು ಅದೃಷ್ಟಗಳು ಅಗತ್ಯ. ನಾನು ಆರಂಭದಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡಿದ್ದೆ. ಆದರೆ, ನನ್ನ ಆಸಕ್ತಿ ರಸಾಯನಶ್ರಾಸ್ತ್ರ ಮತ್ತು ಜೀವಶಾಸ್ತ್ರದ ಕಡೆಗಿತ್ತು. ಹೀಗಾಗಿ ಜೀವಶಾಸ್ತ್ರವನ್ನು ಆರಂಭದ ಹಂತದಿಂದ ಅಧ್ಯಯನ ಮಾಡಿದ ನಂತರ ರಸಾಯಶಾಸ್ತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡೆ ಎಂದರು.
ನ್ಯಾಷನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸ್ ಸಂಸ್ಥೆಯ ನಿರ್ದೇಶಕ ಎಲ್.ಎಸ್.ಶಶಿಧರ್ ಮಾತನಾಡಿ, ವಿಜ್ಞಾನಿಗಳಲ್ಲಿ ಸೋಲು ಎನ್ನುವ ಪದ ಸರಿಯಾಗಿ ಅನ್ವಯಿಸುವುದಿಲ್ಲ. ಪ್ರಯೋಗಗಳು ಕೆಲವೊಮ್ಮೆ ವಿಫಲವಾಗುತ್ತವೆ. ಇದನ್ನು ಸೋಲು ಎಂದು ಭಾವಿಸಬಾರದು. ಪ್ರಯೋಗ ವಿಫಲತೆಗೆ ನಾನಾ ಕಾರಣಗಳಿವೆ. ತಪ್ಪು ಸರಿಪಡಿಸಿಕೊಂಡಾಗ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ. ಇತ್ತೀಚೆಗೆ ಮಾನವ ದೇಹದ ಆಂತರಿಕ ಅಂಗಗಳ ಪುನರ್ ನಿರ್ಮಾಣಕ್ಕೆ ವಿಜ್ಞಾನಿಗಳು ಮುಂದಾಗಿದ್ದಾರೆ. ಆದರೆ, ಈಗಾಗಲೇ ಡೈನಾಸಾರಸ್ ನಂತಹ ಜೀವಿಗಳು ಅಳಿದಿವೆ. ಇವುಗಳನ್ನು ಜೀವಶಾಸ್ತ್ರಜ್ಞರು ಪ್ರಯೋಗಾಲಯಗಳಲ್ಲಿ ಸೃಷ್ಟಿಸಲು ಸಾಧವಿಲ್ಲ ಎಂದರು.ಐಐಎಸ್ಸಿ ಕೌಶಲ್ಯಾಭಿವೃದ್ಧಿ ಕೇಂದ್ರದ ಮುಖ್ಯಸ್ಥ ಬಿ.ಸುಬ್ಬಾರೆಡ್ಡಿ ಮಾತನಾಡಿ, ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳು ನಮ್ಮ ಕ್ಯಾಂಪಸ್‍ಗೆ ಭೇಟಿ ನೀಡಿರುವುದು ವಿಶೇಷ. ಜಿಲ್ಲೆಯ ನಾನಾ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ನಡೆಸಿದ ಸಂವಾದ ನೆನಪಿನಲ್ಲುಳಿಯುವ ಸಂದರ್ಭವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊ.ಡಿ.ಎನ್.ರಾವ್, ಡಾ.ಆರ್. ರಾಘವೇಂದ್ರ, ಡಾ.ಜೋಗಿಂದರ್ ಸಿಂಗ್, ಡಾ. ಅರವಿಂದ್,ಡಾ.ಕಿಶೋರ್ ಇಂಜಿನಿಯರ್ ಹೇಮಂತ್, ಸಿಬ್ಬಂದಿಗಳಾದ ವೀರೇಶ್, ವಿಜಯ್ ಮುಂತಾದವರು ಹಾಜರಿದ್ದರು.----
ಫೋಟೊ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಸಂಜಾತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ರವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.ಚಿತ್ರ 1,2