ಬ್ಯಾಡಗಿ: ಸಾವು ಒಂದು ಸೂಕ್ಷ್ಮ ವಿಷಯ. ನಾವು ಪ್ರೀತಿಸುವ ಮಕ್ಕಳು ಎಂದಿಗೂ ದೂರ ಹೋಗುವುದಿಲ್ಲ. ನಮ್ಮ ಹೃದಯದಲ್ಲಿ ನೆನಪಾಗಿ ಉಳಿಯಲಿದ್ದಾರೆ. ಆದರೆ, ವಿದ್ಯಾರ್ಥಿಗಳು ಅತೀ ಚಿಕ್ಕ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳನ್ನು ಎಂದಿಗೂ ಕೈಗೊಳ್ಳದಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.
ಅತ್ಯಂತ ಪ್ರೀತಿ ಮತ್ತು ಸ್ನೇಹದಿಂದ ಇದ್ದಂತಹ ಕುಟುಂಬ ರೇಖಾಳ ಸಾವು ದುಃಖದಲ್ಲಿ ಮುಳುಗುವಂತೆ ಮಾಡಿದೆ. ಅವರ ದುಃಖದಲ್ಲಿ ನಾವೂ ಪಾಲ್ಗೊಳ್ಳುತ್ತಿದ್ದೇವೆ ಎಂದರು.
ಸಾವು ಒಂದು ಸೂಕ್ಷ್ಮ ವಿಷಯ: ಅಂದು ನಡೆದ ಘಟನೆ ಶಿಕ್ಷಣ ಇಲಾಖೆ ಸೇರಿದಂತೆ ಇಡೀ ಸರ್ಕಾರವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಒಂದು ಕ್ಷಣದಲ್ಲಿ ಮಾಡಿದ ತಪ್ಪು ನಿರ್ಧಾರಗಳು ಸಾವಿನ ಅಂತ್ಯಕ್ಕೆ ಕೊಂಡೊಯ್ಯುವಂತೆ ಮಾಡಿದೆ. ಅತ್ಯಂತ ಕಷ್ಟದಿಂದ ಮೇಲೆ ಬಂದಿದ್ದ ಕುಟುಂಬದಲ್ಲಿ ಒಳ್ಳೆಯ ಹೃದಯವೊಂದು ಮಿಡಿಯುವುದನ್ನು ನಿಲ್ಲಿಸಿದೆ. ಇತರರಿಗೆ ಆದರ್ಶವಾಗಬೇಕಾಗಿದ್ದ ವಿದ್ಯಾರ್ಥಿನಿ ರೇಖಾ ಸಾವಿನ ಮನೆ ಸೇರುವ ಮೂಲಕ ಅನೇಕ ಜೀವ ಹಾಗೂ ಹೃದಯವನ್ನು ಸ್ಪರ್ಶಿಸಿದ್ದಾಳೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಸುರೇಶಗೌಡ ಪಾಟೀಲ, ಮುತ್ತಪ್ಪ ಶಿಗ್ಗಾಂವಿ, ಕಾಂಗ್ರೆಸ್ ಯುವ ಘಟಕದ ಮುಖಂಡ ಬಿ.ಕೆ. ಮೆಡ್ಲೇರಿ, ಮೃತ ಬಾಲಕಿ ತಂದೆ ಫಕ್ಕೀರೇಶ ಗೌಡರ, ಆಪ್ತ ಸಹಾಯಕ ನದಾಫ್, ಪ್ರಾಚಾರ್ಯ ಶಾಂತಪ್ಪ ಹಿತ್ತಲಮನಿ ಸೇರಿದಂತೆ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.