ವಿದ್ಯಾರ್ಥಿಗಳು ದೇಶದ ಸಂಸ್ಕೃತಿ, ಪರಂಪರೆಯ ರಾಯಭಾರಿಗಳು

KannadaprabhaNewsNetwork | Published : Jan 13, 2024 1:34 AM

ಸಾರಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎರಡು ದಿನಗಳ ರಾಷ್ಟ್ರಮಟ್ಟದ Yukti-2K24 ತಾಂತ್ರಿಕ ಸಾಂಸ್ಕೃತಿಕ ಉತ್ಸವ

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಂದಿನ ವಿದ್ಯಾರ್ಥಿಗಳೇ ನಮ್ಮ ದೇಶದ ಸಂಸ್ಕೃತಿ ಮತ್ತು ಜ್ಞಾನ ಪರಂಪರೆಯ ನಿಜವಾದ ರಾಯಭಾರಿಗಳು ಎಂದು ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎರಡು ದಿನಗಳ ರಾಷ್ಟ್ರಮಟ್ಟದ Yukti-2K24 ತಾಂತ್ರಿಕ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದೇಶದ ದೊಡ್ಡ ಶಕ್ತಿ ಎಂದರೇ ಅದು ಅತೀ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿದ್ದು, ಈ ಯುವಶಕ್ತಿ ಯಾವುದೇ ಸಮಾಜವನ್ನು ಕ್ರಾಂತಿಕಾರಿ ರೀತಿಯಲ್ಲಿ ಪರಿವರ್ತಿಸಿ ಅಭಿವೃದ್ಧಿಗೊಳಿಸುವ ಸಾಮರ್ಥ್ಯ ಹೊಂದಿದೆ. ಇಷ್ಟೊಂದು ಅಗಾಧವಾಗಿರುವ ಯುವ ಶಕ್ತಿಯನ್ನು ನಾವು ಹೇಗೆ ಮಾರ್ಗದರ್ಶನ ಮಾಡುತ್ತೇವೆ ಮತ್ತು ಬಳಸುತ್ತೇವೆ. ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಯುವ ಸಮುದಾಯವನ್ನು ಅವರ ಕೌಶಲ್ಯ ಮತ್ತು ಪ್ರತಿಭೆ ಗುರುತಿಸಿ ಉತ್ತೇಜಿಸುವ ಮೂಲಕ ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ನೀಡಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗುವಂತೆ ಮಾಡಬೇಕು ಎಂದು ತಿಳಿಸಿದರು.

ವಿವೇಕಾನಂದರ ಜಯಂತಿ ಸಾಮರ್ಥ್ಯ ಮತ್ತು ಆಕಾಂಕ್ಷೆಗಳೊಂದಿಗೆ ಪ್ರತಿಧ್ವನಿಸುವ ಆಚರಣೆಯಾಗಿದೆ. ಈ ದಿನವು ದಾರ್ಶನಿಕ ವ್ಯಕ್ತಿಯ ಜನ್ಮವನ್ನು ಸ್ಮರಿಸುವುದು ಮಾತ್ರವಲ್ಲದೇ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಯುವಕರ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಗುರುತಿಸುವ ವೇದಿಕೆಯಾಗಿದೆ ಎಂದು ವಿವರಿಸಿದರು.

ಈ ದಿಶೆಯಲ್ಲಿ ವಿಟಿಯು ಈ ರಾಷ್ಟ್ರೀಯ ಯುವ ದಿನದ ಅಂಗವಾಗಿ ತಂತ್ರಜ್ಞಾನ, ಸಂಸ್ಕೃತಿ ಮತ್ತು ಕಲೆಗಳಲ್ಲಿ ಯುವ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ತಂದು ಕೌಶಲ್ಯ ಹಾಗೂ ಪ್ರತಿಭೆಗಳನ್ನು ತೋರ್ಪಡಿಸಲು Yukti-2K24 ವೇದಿಕೆಯನ್ನು ಕಲ್ಪಿಸಿದೆ ಎಂದು ತಿಳಿಸಿದರು.

ವಿಟಿಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್‌.ಶ್ರೀನಿವಾಸ, ಹಣಕಾಸುಅಧಿಕಾರಿ ಎಂ.ಎ.ಸಪ್ನಾ, ಪ್ರಾದೇಶಿಕ ನಿರ್ದೇಶಕ ಪ್ರೊ.ಎಸ್‌.ಬಿ.ದಂಡಗಿ ಮೊದಲಾದವರು ಉಪಸ್ಥಿತರಿದ್ದರು.

ದೇಶದ ಬೇರೆ ರಾಜ್ಯಗಳ ವಿವಿಧ ಸಂಸ್ಥೆಗಳಿಂದ 2500ಕ್ಕೂಹೆಚ್ಚುವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಬಳಿಕ ನೃತ್ಯ, ಹಾಡು, ಪೇಪರ್‌ ಪ್ರೆಸೆಂಟೇಷನ್‌, ಬ್ಯಾಟಲ್ ಆಫ್ಬ್ಯಾಂಡ್ಸ್, ರಂಗೋಲಿ ಸ್ಪರ್ಧೆಗಳು ನಡೆದವು.

ಸ್ವಾಮಿ ವಿವೇಕಾನಂದರ ಬೋಧನೆಗಳು ಆಧ್ಯಾತ್ಮಿಕ ಸಾಮರಸ್ಯ, ಸಹಿಷ್ಣುತೆ ಮತ್ತು ಪ್ರತಿಯೊಬ್ಬ ವ್ಯಕ್ತಿಯಲ್ಲೂ ದೈವತ್ವವನ್ನು ಗುರುತಿಸುವ ತತ್ವಗಳಾಗಿವೆ. ಈ ದಿಶೆಯಲ್ಲಿ ವಿಟಿಯು ಈ ರಾಷ್ಟ್ರೀಯ ಯುವ ದಿನದ ಅಂಗವಾಗಿ ತಂತ್ರಜ್ಞಾನ, ಸಂಸ್ಕೃತಿ ಮತ್ತು ಕಲೆಗಳಲ್ಲಿ ಯುವ ಮನಸ್ಸುಗಳನ್ನು ಒಂದೇ ವೇದಿಕೆಯಲ್ಲಿ ತಂದು ಕೌಶಲ್ಯ ಹಾಗೂ ಪ್ರತಿಭೆಗಳನ್ನು ತೋರ್ಪಡಿಸಲು Yukti-2K24 ವೇದಿಕೆಯನ್ನು ಕಲ್ಪಿಸಿದೆ.

-ಪ್ರೊ.ವಿದ್ಯಾಶಂಕರ. ಎಸ್‌, ವಿಟಿಯು ಕುಲಪತಿ.

Share this article