ಕನ್ನಡಪ್ರಭ ವಾರ್ತೆ, ತುಮಕೂರು
ಮಾದಕ ದ್ರವ್ಯ ವ್ಯಸನಕ್ಕೆ ವಿದ್ಯಾರ್ಥಿಗಳೇ ಹೆಚ್ಚು ದಾಸರಾಗುತ್ತಿರುವುದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆತಂಕ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಬಾಲಭವನದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಆಯೋಜಿಸಲಾಗಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹವಾಸದಿಂದ ಕಾಲೇಜು ವಿದ್ಯಾರ್ಥಿಗಳು ಮದ್ಯ ಹಾಗೂ ಮಾದಕ ದ್ರವ್ಯಗಳ ಚಟಕ್ಕೆ ಮಾರುಹೋಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದಲ್ಲದೆ ವೈಯಕ್ತಿಕ ಬದುಕೂ ಸಹ ಹಾಳಾಗುತ್ತದೆ. ಒಮ್ಮೆ ಮದ್ಯ ಹಾಗೂ ಮಾದಕ ಸೇವನೆಯ ಚಟವನ್ನು ಅಂಟಿಸಿಕೊಂಡರೆ ಅದರಿಂದ ಹೊರ ಬರುವುದು ಕಷ್ಟಸಾಧ್ಯ. ಕುತೂಹಲ, ಮೋಜಿಗಾಗಿ ಮಾದಕ ದ್ರವ್ಯಗಳ ಸೇವನೆಗೆ ತೊಡಗಿಸಿಕೊಂಡ ವ್ಯಕ್ತಿ ಸಮಾಜಕ್ಕೆ ಬಾಧಕನಾಗುತ್ತಾನೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಗುಟ್ಕಾ, ಗಾಂಜಾ, ಹೆರಾಯಿನ್ನಂತಹ ಮಾದಕ ದ್ರವ್ಯಗಳಲ್ಲಿ ನಶೆ ಉಂಟು ಮಾಡುವ ವಸ್ತುಗಳು ಮತ್ತೆ ಮತ್ತೆ ಸೇವಿಸಲು ಪ್ರೇರೇಪಿಸುತ್ತದೆ. ಮದ್ಯ ಹಾಗೂ ಮಾದಕ ವ್ಯಸನಿಗಳಿಂದ ಬೇಡಿಕೆ ಹೆಚ್ಚಿದಂತೆ ಮಾದಕ ದ್ರವ್ಯಗಳ ಪೂರೈಕೆಯೂ ಹೆಚ್ಚುತ್ತದೆ. ಬೇಡಿಕೆಯ ಕೊಂಡಿಯನ್ನು ನಿರ್ಮೂಲನೆ ಮಾಡಿದಾಗ ಮಾತ್ರ ಮಾದಕ ವಸ್ತುಗಳ ಮುಕ್ತ ದೇಶವನ್ನಾಗಿ ರೂಪಿಸಲು ಸಾಧ್ಯವೆಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹದಂತೆ ಮಾದಕ ಸೇವನೆಯೂ ಒಂದು ಕಾಯಿಲೆಯಾಗಿ ಕಾಣಿಸಿಕೊಳ್ಳುತ್ತಿದೆ. ಮಾದಕ ಸೇವನೆ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಪ್ರಕರಣಗಳು ಕಂಡು ಬಂದರೆ ಸ್ಥಳೀಯ ಆಶಾ-ಅಂಗನವಾಡಿ ಕಾರ್ಯಕರ್ತೆಯರು ತಮಗೆ ಮಾಹಿತಿ ನೀಡುವ ಮೂಲಕ ಮಾದಕ ದ್ರವ್ಯಗಳ ನಿರ್ಮೂಲನೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಕಾರ್ಮಿಕರಲ್ಲಿಯೂ ಮದ್ಯ ಹಾಗೂ ಮಾದಕ ಸೇವನೆ ಹೆಚ್ಚಾಗಿ ವರದಿಯಾಗುತ್ತಿದೆ. ಮಾದಕ ವಸ್ತುಗಳು ಹಾಗೂ ಅದರ ಪದಾರ್ಥಗಳ ನಿಯಂತ್ರಣ ಕಾಯ್ದೆಯನ್ವಯ ಯಾವುದೇ ನಶೆ ಬರಿಸುವ ವಸ್ತುಗಳಿಂದ ಮಾನಸಿಕ ಹಾಗೂ ಶಾರೀರಿಕ ಸ್ಥಿತಿ ಹಾಳಾಗುವುದಲ್ಲದೆ ಮನೆ, ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ಪುರುಷರಲ್ಲಿ ಹೆಚ್ಚಾಗಿ ಕಂಡು ಬಂದರೂ ಮಹಿಳೆಯರೂ ಸಹ ವ್ಯಸನಿಗಳಾಗುತ್ತಿದ್ದಾರೆ. ಮಾದಕ ದ್ರವ್ಯ ಸೇವನೆಯಿಂದ ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಬೀದಿ ಪಾಲಾಗಿವೆ. ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿತು ಅದರ ಸೇವನೆಯಿಂದ ಹೊರಬರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರಂಗಸ್ವಾಮಿ ಎಂ.ಆರ್. ಉಪನ್ಯಾಸ ನೀಡುತ್ತಾ, ಮಾದಕ ವಸ್ತುಗಳ ದುರುಪಯೋಗವು ಇತ್ತೀಚಿನ ವರ್ಷಗಳಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಮಾದಕ ವಸ್ತುಗಳ ಸೇವನೆಯು ಮೆದುಳಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸುತ್ತದೆ. ದೈಹಿಕ ಹಾಗೂ ಮಾನಸಿಕ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ. ಸ್ವಾಗತಿಸಿದರು.ಡಾ: ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಕೆ. ರಾಜಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವಾರ್ತಾಸಹಾಯಕ ಆರ್. ರೂಪಕಲಾ, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.*************
ಕೋಟ್...ಮಾದಕ ವ್ಯಸನಿಗಳಲ್ಲಿ ಶೇ.75ರಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಾದಕ ವ್ಯಸನದ ಪರಿಣಾಮವಾಗಿ ಪ್ರತೀ ವರ್ಷ ದೇಶದಲ್ಲಿ 15 ಲಕ್ಷ ಮಂದಿ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಇದರಿಂದ ಅಪಘಾತಗಳು, ಆತ್ಯಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಪೂರೈಕೆ ಜಾಲವನ್ನು ನಿಯಂತ್ರಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ - ಶುಭ್ ಕಲ್ಯಾಣ್ ಜಿಲ್ಳಾಧಿಕಾರಿ.