ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ಸುಂಕಸಾಳ ಶಾಲೆಯ ಮಕ್ಕಳು

KannadaprabhaNewsNetwork |  
Published : Nov 19, 2026, 02:30 AM IST
ಶಾಲೆಯ ಅಡಿಪಾಯವೆ ಕುಸಿದಿರುವದನ್ನು ತೋರಿಸುತ್ತಿರುವ ಎಸ್‌ಡಿಎಂಸಿ ಅಧ್ಯಕ್ಷ ಸಂದೀಪ ನಾಯ್ಕ. | Kannada Prabha

ಸಾರಾಂಶ

ಇತ್ತ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ, ಬೇಡವೋ ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ. ಇಂತಹ ಹೃದಯವಿದ್ರಾವಕ ಸ್ಥಿತಿಗೆ ಸಾಕ್ಷಿಯಾಗಿರುವುದು ಅಂಕೋಲಾ ತಾಲೂಕಿನ ಸುಂಕಸಾಳ ಹಿರಿಯ ಪ್ರಾಥಮಿಕ ಶಾಲೆ.

ರಾಘು ಕಾಕರಮಠ

ಅಂಕೋಲಾ: ಒಂದೆಡೆ ಅಕ್ಷರ ಕಲಿಯುವ ಆಸೆ, ಮತ್ತೊಂದೆಡೆ ತಲೆಯ ಮೇಲೆ ಯಾವ ಕ್ಷಣದಲ್ಲಾದರೂ ಕುಸಿದು ಬೀಳಬಹುದಾದ ಶಾಲಾ ಕಟ್ಟಡದ ಆತಂಕ. ಪಾಠದ ಮೇಲೆ ಗಮನ ಹರಿಸಬೇಕಾದ ಎಳೆಯ ಮಕ್ಕಳು, ಕಟ್ಟಡದ ಗೋಡೆಗಳು ಯಾವಾಗ ಕುಸಿಯುತ್ತವೆಯೋ ಎಂಬ ಭಯದಲ್ಲೇ ದಿನ ಕಳೆಯುವ ದುಸ್ಥಿತಿ.

ಇತ್ತ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ, ಬೇಡವೋ ಎಂಬ ಆತಂಕ ಪಾಲಕರನ್ನು ಕಾಡುತ್ತಿದೆ. ಇಂತಹ ಹೃದಯವಿದ್ರಾವಕ ಸ್ಥಿತಿಗೆ ಸಾಕ್ಷಿಯಾಗಿರುವುದು ಅಂಕೋಲಾ ತಾಲೂಕಿನ ಸುಂಕಸಾಳ ಹಿರಿಯ ಪ್ರಾಥಮಿಕ ಶಾಲೆ.

ಈ ಶಾಲೆಗೆ ಸುಮಾರು 75 ವರ್ಷಗಳ ಭವ್ಯ ಇತಿಹಾಸವಿದೆ. ಹಲವು ತಲೆಮಾರುಗಳಿಗೆ ಅಕ್ಷರದ ಬೆಳಕು ನೀಡಿದ ಈ ವಿದ್ಯಾಮಂದಿರ ಇಂದು ತಾನೇ ಉಳಿವಿಗಾಗಿ ಹೋರಾಡುವ ದುಸ್ಥಿತಿಗೆ ತಲುಪಿದೆ. ಏಳು ದಶಕಗಳ ಹಿಂದೆ ನಿರ್ಮಿಸಲಾದ ಶಾಲೆಯ ನಾಲ್ಕು ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಯಾವ ಕ್ಷಣದಲ್ಲಾದರೂ ಕುಸಿಯಬಹುದಾದ ಅಪಾಯ ಎದುರಿಸುತ್ತಿವೆ.

ಆಘಾತಕಾರಿ ಸಂಗತಿಯೆಂದರೆ, ಕಟ್ಟಡದ ಅಡಿಪಾಯವೇ ಕುಸಿದು ಹೋಗಿದ್ದು, ಗೋಡೆಗಳ ಆಸರೆಯಲ್ಲಿಯೇ ಕಟ್ಟಡ ನಿಂತಿದೆ ಎನ್ನಲಾಗಿದೆ. ಶಿಕ್ಷಣ ಇಲಾಖೆಯೂ ಕಟ್ಟಡಗಳ ದುಸ್ಥಿತಿಯನ್ನು ಗುರುತಿಸಿ, ಅವು ಸಂಪೂರ್ಣ ಜೀರ್ಣಾವಸ್ಥೆಯಲ್ಲಿವೆ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಪರಿಶೀಲನೆ ನಡೆಸಿದ ಲೋಕೋಪಯೋಗಿ ಇಲಾಖೆ ಕಟ್ಟಡ ತೆರವಿಗೆ ಅಗತ್ಯವಾದ ನಿರಾಪೇಕ್ಷಣಾ ಪತ್ರ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಮುಂದಿನ ಕ್ರಮಕ್ಕೆ ತೊಡಕಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಶಾಲೆಯಲ್ಲಿ 34 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನ ಶಾಲೆಗೆ ಬರುವ ಮಕ್ಕಳು ಜೀವದ ಹಂಗು ತೊರೆದು ಪಾಠ ಕೇಳುವಂತಾಗಿದೆ. ಕೈಗಾ ಅಣುಸ್ಥಾವರದ ಸಮೀಪದಲ್ಲಿರುವ ಈ ಭಾಗದ ಮಕ್ಕಳಿಗೆ ಸುರಕ್ಷಿತ ಶಿಕ್ಷಣ ವಾತಾವರಣ ಕಲ್ಪಿಸಬೇಕಾದ ಅಗತ್ಯವೂ ಇದೆ. ಶಾಲೆಯ ಕಟ್ಟಡದ ಸ್ಥಿತಿ ಕಂಡು ಪಾಲಕರು ಆತಂಕಗೊಂಡಿದ್ದು, ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ.

ಕಟ್ಟಡ ಕುಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. 75 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯು ಮಕ್ಕಳ ಜೀವಕ್ಕೆ ಅಪಾಯಕಾರಿಯಾಗುವ ಮುನ್ನವೇ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯಪ್ರವೃತ್ತರಾಗಿ, ಹಳೆಯ ಕಟ್ಟಡ ತೆರವುಗೊಳಿಸಿ ಸುಸಜ್ಜಿತ ನೂತನ ಶಾಲಾ ಕಟ್ಟಡ ನಿರ್ಮಿಸಿಕೊಡಬೇಕಿದೆ.

ಕ್ರಮ ಕೈಗೊಳ್ಳಲಿ: ಇಲ್ಲಿ ಮಕ್ಕಳು ಅತ್ಯಂತ ದಯನೀಯ ಸ್ಥಿತಿಯಲ್ಲಿ ಪಾಠ ಕೇಳುವಂತಾಗಿದೆ. ಕಟ್ಟಡದ ಸುರಕ್ಷತೆ ಇಲ್ಲದಿರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಇಲಾಖೆ ಇಚ್ಛಾಶಕ್ತಿ ಪ್ರದರ್ಶಿಸಿ, ಶಿಥಿಲ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುಂಕಸಾಳದ ಹಿಪ್ರಾ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸಂದೀಪ ಅಶೋಕ ನಾಯ್ಕ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿವಿಯ ಸಮಸ್ಯೆಯನ್ನು ಕಡೆಗಣಿಸಬಾರದು : ಡಾ. ಪವನ್ ಕುಮಾರ್
ನಮ್ಮಲ್ಲಿರುವ ತಪ್ಪುಗಳನ್ನು ತೊಡೆದು ಹಾಕುವುದೇ ಆಧ್ಯಾತ್ಮ: ಪ್ರೊ. ನಂದನ್ ಪ್ರಭು