ಬಸ್ ಡಿಪೋಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

KannadaprabhaNewsNetwork | Published : Nov 20, 2024 12:30 AM

ಸಾರಾಂಶ

ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ ಬಸ್ ಡಿಪೋಗಳ ಎಲ್ಲ ಬಸ್‌ಗಳನ್ನು ಭೈರನಹಟ್ಟಿ ಗ್ರಾಮದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡದಿದ್ದರೆ ನಾವು ಬಸ್‌ ಡಿಪೋಗೆ ಬೀಗ ಜಡಿದು ಉಗ್ರ ಹೋರಾಟ ಮಾಡುತ್ತವೆ

ನರಗುಂದ: ಕೊಣ್ಣೂರ ಕಡೆಯಿಂದ ಭೈರನಹಟ್ಟಿ ಮಾರ್ಗವಾಗಿ ನರಗುಂದಕ್ಕೆ ಹೋಗುವ ಯಾವುದೇ ಬಸ್‌ಗಳು ಹಲವು‌ ದಿನಗಳಿಂದ ಭೈರನಹಟ್ಟಿ ಗ್ರಾಮದಲ್ಲಿ ನಿಲುಗಡೆ ಆಗುತ್ತಿಲ್ಲ, ಅದರಿಂದ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ, ಗ್ರಾಮದ ವಿದ್ಯಾರ್ಥಿಗಳು ಮಂಗಳವಾರ ಬಸ್ ಡಿಪೋಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವಿದ್ಯಾರ್ಥಿಗಳು ಮೊದಲು ಗ್ರಾಪಂಗೆ ಮನವಿ ಸಲ್ಲಿಸಿದರು. ಬಳಿಕ ಟ್ರ್ಯಾಕ್ಟರ್‌ನಲ್ಲಿ ನರಗುಂದ ಬಸ್‌ ಡಿಪೋಗೆ ಆಗಮಿಸಿದರು. ಅಲ್ಲಿ ಪ್ರತಿಭಟನೆ ನಡೆಸಿ, ಘಟಕ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಅವರಿಗೆ ಮನವಿ ಅರ್ಪಿಸಿ‌ದರು. ಬಸ್‌ ಸೌಕರ್ಯ ಒದಗಿಸುವಂತೆ ಅಕ್ಟೋಬರ್ ತಿಂಗಳಲ್ಲಿಯೇ ನಾಲ್ಕೈದು ಬಾರಿ ಮನವಿ ನೀಡಿದ್ದೇವೆ. ಭೈರನಹಟ್ಟಿ ಗ್ರಾಮದಿಂದ ಬೆಳಗ್ಗೆ 8.30ರಿಂದ 9 ಗಂಟೆಯೊಳಗೆ 8 ಕಿಮೀ ದೂರದಲ್ಲಿರುವ ನರಗುಂದ ಪಟ್ಟಣದ ಶಾಲೆಗಳಿಗೆ ಹಲವು ವಿದ್ಯಾರ್ಥಿಗಳು ಹೋಗಬೇಕು. ಆದರೆ ಈ ಸಮಯದಲ್ಲಿ ಯಾವುದೇ ಬಸ್‌ ನಿಲ್ಲಿಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ಶಾಲಾಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ಶಾಲೆಗೆ ತಡವಾಗಿ ಹೋದರೆ ದಂಡ ಹಾಕುತ್ತಾರೆ. ನಾವು ಶಿಕ್ಷಣ ಕಲಿಯುವುದಾದರೂ ಹೇಗೆ? ವರ್ಷದಿಂದ ಬಸ್‌ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಇದೇ ರೀತಿ ಮುಂದುವರಿದರೆ ಪೊಲೀಸ್‌ ಠಾಣೆಗೆ ದೂರು ನೀಡುವುದಾಗಿ ವಿದ್ಯಾರ್ಥಿಗಳು ಹೇಳಿದರು.

ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ ಬಸ್ ಡಿಪೋಗಳ ಎಲ್ಲ ಬಸ್‌ಗಳನ್ನು ಭೈರನಹಟ್ಟಿ ಗ್ರಾಮದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡದಿದ್ದರೆ ನಾವು ಬಸ್‌ ಡಿಪೋಗೆ ಬೀಗ ಜಡಿದು ಉಗ್ರ ಹೋರಾಟ ಮಾಡುತ್ತವೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಬಸ್‌ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದ್ದರಿಂದ ವಿದ್ಯಾರ್ಥಿಗಳ ಜತೆ ಕಂಡಕ್ಟರ್‌ ಸೌಜನ್ಯದಿಂದ ವರ್ತಿಸುತ್ತಿಲ್ಲ. ಏಕವಚನ ಮತ್ತು ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಶಾಲೆಗೆ ಹೋಗುವ ಉತ್ಸಾಹ ಕಳೆದುಕೊಳ್ಳುತ್ತಿದ್ದೇವೆ. ಪರೀಕ್ಷೆ ಹತ್ತಿರ ಬಂದಾಗಲೂ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದು ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.

ತಾಲೂಕಿನ ಹದಲಿ, ಸುರಕೋಡ ಗ್ರಾಮದ ವಿದ್ಯಾರ್ಥಿಗಳೂ ಸಮಯಕ್ಕೆ ಸರಿಯಾಗಿ ಬಸ್‌ಗಳು ಬಾರದಿರುವುದನ್ನು ಖಂಡಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಬಸ್‌ ಡಿಪೋ ವ್ಯವಸ್ಥಾಪಕ ಪ್ರಶಾಂತ ಅವರು ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಬಿ.ಬಿ. ಐನಾಪುರ, ಚಂದ್ರು ದಂಡಿನ, ಹನುಮಂತ ಸಂಗಟಿ, ಪ್ರಕಾಶ ನರಸಾಪುರ, ನಾಗೇಶ ನರಸಾಪುರ, ಜ್ಞಾನೇಶ ಮುನೇನಕೊಪ್ಪ, ಬಸವಣ್ಣೆವ್ವ ಮೆಣಸಿನಕಾಯಿ, ರೇಣುಕಾ ನರಸಾಪುರ, ರಮೇಶ ವೀರನಗೌಡ್ರ ಇದ್ದರು.

Share this article