ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಂಡಾಗ ಗುರಿ ಸಾಧಿಸಲು ಸಾಧ್ಯ-ಹುಲ್ಮನಿ

KannadaprabhaNewsNetwork |  
Published : Aug 19, 2024, 12:47 AM IST
ಪೊಟೊ ಶಿರ್ಷಕೆ೧೮ಎಚ್‌ಕೆಆರ್ ೦೫ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಜೀವನದಲ್ಲಿ ಸಮಯ ಅತ್ಯಂತ ಅಮೂಲ್ಯವಾದದ್ದು, ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ಒತ್ತಾಯ ಪೂರ್ವಕವಾಗಿಮಾಡಬಾರದು. ಅದರಿಂದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಮ್.ಎಮ್. ಹುಲ್ಮನಿ ಹೇಳಿದರು.

ಹಿರೇಕೆರೂರು: ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಜೀವನದಲ್ಲಿ ಸಮಯ ಅತ್ಯಂತ ಅಮೂಲ್ಯವಾದದ್ದು, ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ಒತ್ತಾಯ ಪೂರ್ವಕವಾಗಿ ಮಾಡಬಾರದು. ಅದರಿಂದ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಮ್.ಎಮ್. ಹುಲ್ಮನಿ ಹೇಳಿದರು.ಪಟ್ಟಣದ ವೀರ ರಾಣಿ ಕಿತ್ತೂರು ಚನ್ನಮ್ಮ ಸಭಾಭವನದಲ್ಲಿ ಭಾನುವಾರ ನಡೆದ ತಾಲೂಕು ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಪಾಲಕರು ಕಷ್ಟಪಡುತ್ತಾರೆ. ಇದನ್ನು ಅರಿತು ಮಕ್ಕಳು ಶೈಕ್ಷಣಿಕ ಪ್ರಗತಿ ಹೊಂದುವಲ್ಲಿ ಶ್ರಮಿಸಬೇಕು. ಏಕಾಗ್ರತೆಯ ಮತ್ತು ಜ್ಞಾಪಕ ಶಕ್ತಿಯ ವೃದ್ಧಿ ಹಾಗೂ ಆಸಕ್ತಿ ಹೊಂದಿದ್ದರೆ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ, ತನ್ನ ಗುರಿ ಸಾಧನೆಯ ಹಾದಿ ಸುಗಮವಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿ ಸಮೂಹ ಶಿಕ್ಷಕರೊಂದಿಗೆ, ಪಾಲಕರೊಂದಿಗೆ ಹಾಗೂ ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡರೆ ಇದರಿಂದ ಮುಂದೆ ಸಮಾಜವನ್ನು ಸಂಸ್ಕಾರಗೊಳಿಸಲು ಸಾಧ್ಯವಾಗುತ್ತದೆ ಎಂದರು.ಸಮಾಜದ ನಿಕಟಪೂರ್ವ ಅಧ್ಯಕ್ಷ ಡಾ. ನಿಂಗಪ್ಪ ಚಳಗೇರಿ ಮಾತನಾಡಿ, ಇಂದಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಮೂಂಚೂಣಿಯಲ್ಲಿ ಇರಬೇಕಾದರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿಯೂ ಉತ್ತಮ ಬದಲಾವಣೆ ಹೊಂದಬೇಕು. ಕಲಿಕೆಗೆ ಸೃಜನಶೀಲತೆಯ ಅಗತ್ಯವಿದೆ. ತಮ್ಮ ದೈನಂದಿನ ಜೀವನದಲ್ಲಿನ ಸವಾಲುಗಳನ್ನು ಎದುರಿಸಲು ಸೃಜನಶೀಲತೆ ಪ್ರಮುಖ ಪಾತ್ರ ವಹಿಸುತ್ತದೆ. ಸೃಜನಾತ್ಮಕತೆಯು ಪ್ರಾಯೋಗಿಕ ಚಿಂತನೆಯ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ, ಹೀಗಾಗಿ ಇಂದು ಮಕ್ಕಳನ್ನು ಸೃಜನಾತ್ಮಕವಾಗಿ ಯೋಚಿಸಲು ಪ್ರೋತ್ಸಾಹಿಸುವುದು ಬಹಳ ಮುಖ್ಯವಾಗಿರುತ್ತದೆ ಎಂದರು.ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಕುಮಾರ ತಿಪ್ಪಶೇಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಕೊಡುವಷ್ಟೇ ಮಹತ್ವವನ್ನು ಜೀವನದ ಮೌಲ್ಯಗಳಿಗೂ ಕೊಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮಾನವೀಯ ಗುಣಗಳ ಜತೆಯಲ್ಲಿ ಸಂಬಂಧಗಳ ಮಹತ್ವಗಳನ್ನು ಅರಿತು ಕೊಂಡು ಅವುಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಜೀವನದ ಮೌಲ್ಯಗಳ ಮಹತ್ವವನ್ನು ಅರಿತು ಕೊಂಡರೆ ಮೌಲ್ಯಾಧರಿತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಹಾಗೂ ನ್ಯಾಯವಾದಿ ಎಸ್.ಆರ್. ಅಂಗಡಿ ಮಾತನಾಡಿ, ದೇಶದ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ, ಈ ದಿಸೆಯಲ್ಲಿ ವಿದ್ಯಾರ್ಥಿಗಳು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಮುಗಿದ ನಂತರವೂ ಸಮಾಜದ ಬಗ್ಗೆ ಕಳಕಳಿಯನ್ನು ಬೆಳೆಸಿಕೊಂಡು ಸಮಾಜ ಮತ್ತು ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಕೈಜೋಡಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಂಠಾಧರ ಅಂಗಡಿ, ರುದ್ರಮನಿ ಹುಲ್ಮನಿ, ನೀಲಮ್ಮ ಹೊಸಮನಿ, ಶೋಭಾ ಅಂಗಡಿ, ಪೂಜಾ ಅಂಗಡಿ, ರಾಜು ತಿಪ್ಪಶೇಟ್ಟಿ, ವೀರೇಶ ಕೋರಿಶೆಟ್ಟರ, ಗೀತಾ ಪಾಟೀಲ, ಡಾ. ಬಸವರಾಜ ಪೂಜಾರ, ಜಿ.ವಿ. ಅಂಗಡಿ, ಎಮ್.ಜಿ.ಈಶ್ವರಗೌಡ್ರ, ಎಮ್.ಡಿ. ಸೀಮಿಕೇರಿ, ಸತೀಶ ಕೋರಿಗೌಡ್ರ, ಕೆ.ಎಂ. ಕಾಟೇನಹಳ್ಳಿ, ಮಲ್ಲೇಶಪ್ಪ ಹಾದ್ರಿಹಳ್ಳಿ, ಉಮೇಶ ಯಡಂಗಳಿ, ಕುಮಾರ ಬಣಕಾರ, ಹೊಳಿಯಪ್ಪ ಬಣಕಾರ, ಕುಮಾರ ಜಕ್ಕಪ್ಪಳವರ, ಮಾಜಿ ಸೈನಿಕ ಕುಮಾರ ಲಮಾಣಿ ಹಾಗೂ ವಿದ್ಯಾರ್ಥಿಗಳು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ಆಗ್ರಹ
ಸಮಾಜದಲ್ಲಿ ಮಹಿಳೆಯರನ್ನು ಪ್ರಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ: ಶಾಸಕ