ಮೊರಾರ್ಜಿ ಶಾಲೆಯಲ್ಲಿ ಚಿಕನ್‌ಗಾಗಿ ವಿದ್ಯಾರ್ಥಿಗಳ ಬಡಿದಾಟ

KannadaprabhaNewsNetwork |  
Published : Jul 23, 2026, 02:30 AM IST
ಹೂವಿನಹಡಗಲಿ ತಾಲೂಕಿನ ಗಿರಿಯಾಪುರ ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಜರುಗಿದ ಗಲಾಟೆ ಕುರಿತು ಪೊಲೀಸರು ಮಧ್ಯಸ್ಥಿಕೆಯಲ್ಲಿ ತಿಳುವಳಿಕೆ ಸಬೆ ಮಾಡುತ್ತಿರುವುದು.  | Kannada Prabha

ಸಾರಾಂಶ

ಗಿರಿಯಾಪುರ ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳು ಬಾಡೂಟಕ್ಕಾಗಿ ಬಡಿದಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಹೂವಿನಹಡಗಲಿ: ತಾಲೂಕಿನ ಗಿರಿಯಾಪುರ ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳು ಬಾಡೂಟ (ಮಾಂಸಹಾರ)ಕ್ಕಾಗಿ ಬಡಿದಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.

ಈ ವಸತಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಬಾಡೂಟದಲ್ಲಿ ತಾರತಮ್ಯ ಕುರಿತು ಶುರುವಾದ ಗಲಾಟೆ, ಮಾತಿನ ಚಕಮಕಿ ನಡೆದು ಬಡಿದಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿದ್ಯಾರ್ಥಿಗಳಲ್ಲಿ ಘರ್ಷಣೆ ಹೆಚ್ಚಾಗುತ್ತಿದಂತೆಯೇ ಗ್ರಾಮಸ್ಥರು ಹೋಗಿ, ಮಕ್ಕಳಿಗೆ ಮತ್ತು ವಸತಿ ಶಾಲೆ ಪ್ರಾಚಾರ್ಯರು, ಸಿಬ್ಬಂದಿ ವರ್ಗಕ್ಕೆ ತಿಳಿವಳಿಕೆ ನೀಡಿದ್ದರೂ ಗಲಾಟೆ ನಿಯಂತ್ರಣಕ್ಕೆ ಬರಲಿಲ್ಲ.

ವಸತಿ ಶಾಲೆಯ ನಿಯಮದ ಪ್ರಕಾರ ಪ್ರತಿವಾರ ಚಿಕನ್ ಬಡಿಸುವಲ್ಲಿ ತರಗತಿವಾರು ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ವಿದ್ಯಾರ್ಥಿಗಳು ಗಲಾಟೆ ಆರಂಭಿಸಿದ್ದಾರೆ. ಈ ವಿಚಾರವಾಗಿ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಚಕಮಕಿ ಶುರುವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕೆಲ ವಿದ್ಯಾರ್ಥಿಗಳು ಹಿರೇಹಡಗಲಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ವಸತಿ ಶಾಲೆಗೆ ಭೇಟಿ ನೀಡಿದ ಪೊಲೀಸರು ಗಲಾಟೆ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಹೇಳಿ ಹೋಗಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರಾರ್ಥನೆ ಬಳಿಕ ಮತ್ತೆ ವಿದ್ಯಾರ್ಥಿಗಳ ಗಲಾಟೆ ಶುರುವಾಗಿತ್ತು. ವಿಷಯ ತಿಳಿದು ವಸತಿ ಶಾಲೆಗೆ ಆಗಮಿಸಿದ ಪೋಷಕರೊಂದಿಗೆ ವಸತಿ ಶಾಲೆಗೆ ಪೊಲೀಸರು ಭೇಟಿ ನೀಡಿ, ವಿದ್ಯಾರ್ಥಿಗಳು ಪೋಷಕರ ಸಭೆ ನಡೆಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕೆಳ ತರಗತಿ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ಬಹು ದಿನಗಳಿಂದಲೂ ಊಟ, ಉಪಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋಗಿದ್ದಾರೆ. ವಸತಿ ಶಾಲೆ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯೇ ಇಷ್ಟಕ್ಕೆಲ್ಲ ಕಾರಣ ಎಂದು ಪೋಷಕರು ಆರೋಪಿಸಿದರು.

ಪೊಲೀಸರು ವಸತಿ ವಿದ್ಯಾರ್ಥಿಗಳು ಮತ್ತು ವಸತಿ ಶಾಲೆ ಸಿಬ್ಬಂದಿಯ ಸಭೆ ನಡೆಸಿ, ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಇನ್ಮುಂದೆ ಗಲಾಟೆಯಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಾಲೆಯ ಪ್ರಾಚಾರ್ಯ ಎಂ.ಎಸ್. ಪಾಟೀಲ್, ಪ್ರಭಾರ ನಿಲಯ ಪಾಲಕ ಆನಂದ ನಾಯ್ಕ, ಪಾಲಕರಾದ ಹಾಲೇಶ, ಚಾಂದ್‌ಬಾಷಾ, ಗಂಗಪ್ಪ, ಮಲ್ಲೇಶ ನಾಯ್ಕ, ಅಶೋಕ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ಸಚಿವ ಖಾದರ್‌ಗೆ ‘ಎಎಂಇಸಿ ಗ್ಲೋಬಲ್‌ ಸಿವಿಕ್‌ ಲೀಡರ್‌ಶಿಪ್’ ಪ್ರಶಸ್ತಿ
ಎಸ್ಐಆರ್‌ ಮಹಾ ಅಭಿಯಾನ: ಶಾಸಕರ ವಾರ್ಡ್‌ ಭೇಟಿ