ಆಡಳಿತ ಪಕ್ಷ, ಪ್ರತಿಪಕ್ಷದ ನಾಯಕರು ಹಾಗೂ ಮಂತ್ರಿಗಳ ಪಾತ್ರಗಳನ್ನು ವಹಿಸಿ ಪ್ರಚಲಿತ ಸಮಸ್ಯೆಗಳ ಕುರಿತು ಅಣುಕು ಸಂಸತ್ ಕಲಾಪ ಮೂಲಕ ವಿದ್ಯಾರ್ಥಿಗಳು ಯುವ ಸಂಸತ್ ಬಗ್ಗೆ ತಿಳಿದುಕೊಳ್ಳುವಲ್ಲಿ ಸಹಕಾರಿಯಾಗಿದೆ.
ಕಲಘಟಗಿ:
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ನಾಯಕತ್ವದ ಗುಣ ಬೆಳೆಸುವುದು ಸುರಕ್ಷಿತ ಮತ್ತು ಸುಭದ್ರ ದೇಶಕ್ಕೆ ಅತ್ಯವಶ್ಯವಾಗಿದೆ ಎಂದು ಪ್ರೊಬೆಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಶಕ್ಯ ಹೇಳಿದರು.
ಪಟ್ಟಣದ ಗುಡ್ ನ್ಯೂಸ್ ಮಹಾ ವಿದ್ಯಾಲಯದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಆಡಳಿತ ಪಕ್ಷ, ಪ್ರತಿಪಕ್ಷದ ನಾಯಕರು ಹಾಗೂ ಮಂತ್ರಿಗಳ ಪಾತ್ರಗಳನ್ನು ವಹಿಸಿ ಪ್ರಚಲಿತ ಸಮಸ್ಯೆಗಳ ಕುರಿತು ಅಣುಕು ಸಂಸತ್ ಕಲಾಪ ಮೂಲಕ ವಿದ್ಯಾರ್ಥಿಗಳು ಯುವ ಸಂಸತ್ ಬಗ್ಗೆ ತಿಳಿದುಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದರು.
ವಕೀಲ ರಮೇಶ ಸೋಲಾರಗೊಪ್ಪ ಮಾತನಾಡಿದರು. ನಂತರ ಯುವ ಸಂಸತ್ತು ಅಣುಕು ಪ್ರದರ್ಶನದಲ್ಲಿ ವಿದ್ಯಾರ್ಥಿಗಳೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಭಾಪತಿ, ವಿವಿಧ ಖಾತೆಗಳ ಸಚಿವರು, ವಿರೋಧ ಪಕ್ಷದ ನಾಯಕ ಹಾಗೂ ಉಪನಾಯಕರ ಪಾತ್ರ ವಹಿಸಿ ಸಂಸತ್ತಿನ ಮಾದರಿಯಲ್ಲಿ ಖಡಕ್ ಪ್ರಶ್ನೆ-ಖಡಕ್ ಉತ್ತರಗಳ ಮೂಲಕ ಚರ್ಚೆ ನಡೆಸಿದರು. ಸದ್ಯದ ರಾಜಕೀಯ ಪರಿಸ್ಥಿತಿಗೆ ಹೋಲುವಂತೆಯೇ ಪ್ರಶ್ನೋತ್ತರಗಳು ಮೂಡಿ ಬಂದವು.
ವಿದ್ಯಾರ್ಥಿ ಸಂಸತ್ತು ನೈಜ ಸಂಸತ್ತಿನಂತೆ ಗಂಭೀರವಾಗಿ ನಡೆಯಿತು. ಗ್ರಾಮೀಣ ಸಮಸ್ಯೆ, ಸ್ವಚ್ಛತೆ, ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಮಸ್ಯೆ, ವಿದ್ಯುತ್ ಸಮಸ್ಯೆ, ಕರ್ನಾಟಕ ಭಾಗದ ಉದ್ಯೋಗ, ರಾಜ್ಯ ಎದುರಿಸುತ್ತಿರುವ ಬರಗಾಲಕ್ಕೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು, ಪಶುಸಂಗೋಪನೆ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಬಲಪಡಿಸಲು ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಶ್ನೋತ್ತರಗಳು ನಡೆದವು.
ಚರ್ಚೆಯ ಮಧ್ಯೆ ಆಡಳಿತ ಹಾಗೂ ವಿರೋಧ ಪಕ್ಷದ ಪಾತ್ರದಲ್ಲಿದ್ದ ವಿದ್ಯಾರ್ಥಿಗಳ ನಡುವೆ ಬಿಸಿ ವಾಗ್ವಾದವೂ ನಡೆಯಿತು. ಪರಿಸ್ಥಿತಿ ಕೈಮೀರಿದಾಗ ಸಭಾಪತಿ ಪಾತ್ರದಲ್ಲಿದ್ದ ವಿದ್ಯಾರ್ಥಿನಿ ಮಧ್ಯಪ್ರವೇಶಿಸಿ ಸಭೆಯನ್ನು ಮುಂದೂಡಿದರು. ಬಳಿಕ ಶಾಸಕರ ಪಾತ್ರದಲ್ಲಿದ್ದ ವಿದ್ಯಾರ್ಥಿಗಳು ಚುಕ್ಕೆ ಗುರುತಿನ ಪ್ರಶ್ನೆಗಳ ಮೂಲಕ ಸರ್ಕಾರದ ಗಮನ ಸೆಳೆದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು
ಇದೇ ವೇಳೆ ತಾಲೂಕು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ವೈ. ಸಾವಂತ್, ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಅನುಷ ಹಿರೇಮಠ, ತಾಲೂಕು ಶಿರಸ್ತೇದಾರ್ ಬಸವರಾಜ್ ಅಂಗಡಿ, ದಿಲಶಾದ್ ಮೋಕಾಶಿ, ಶಂಕರ ವನ್ನಳ್ಳಿ, ಮೋಹನ್ ಕಳಸೂರು, ಮಾಲತಿ ಹಿರೇಮಠ, ಶಶಿಕುಮಾರ ಕಟ್ಟಿಮನಿ, ಗುರುನಾಥ್ ಸಜ್ಜನ್, ನಾಗಪ್ಪ ಮನ್ನಿಕೇರಿ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.