ಅಧಿಕಾರಿಗಳು ಪರಿಶೀಲಿಸಿ, ಸಮಸ್ಯೆಗೆ ಕಾರಣವನ್ನು ಗುರುತಿಸಿ, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಭಟ್ಕಳ: ಸಹಾಯಕ ಎಂಜಿನಿಯರ್ ಅಭಿಷೇಕ್ ಮತ್ತು ತಜ್ಞ ರಾಜೀವ್ ಸೇರಿದಂತೆ ಕಾರವಾರದ ಜಲ ಮಂಡಳಿ ಅಧಿಕಾರಿಗಳ ತಂಡವೊಂದು ಬುಧವಾರ ಶರಾಬಿ ಹೊಳೆಗೆ ಒಳಚರಂಡಿ ನೀರು ಬಿಡಲಾಗುತ್ತಿರುವ ಕುರಿತು ಮಾಹಿತಿ ಕಲೆಹಾಕಲು ಪಂಪಿಂಗ್ ಸ್ಟೇಷನ್‌ಗೆ ಭೇಟಿ ನೀಡಿ ಪರಿಶೀಲಿಸಿತು.

ಇಲ್ಲಿನ ಗೌಸಿಯಾ ಸ್ಟ್ರೀಟಿನಲ್ಲಿರುವ ಒಳಚರಂಡಿ ಪಂಪಿಂಗ್ ಸ್ಟೇಷನ್‌ನಿಂದ ಸಂಸ್ಕರಿಸದ ತ್ಯಾಜ್ಯ ನೀರು ನೇರವಾಗಿ ಶರಾಬಿ ನದಿಗೆ ಹರಿಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಪ್ರಜಾಸೇವೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗೌಸೀಯಾ ಸ್ಟ್ರೀಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶರಾಬಿ ಹೊಳೆಗೆ ಒಳಚರಂಡಿ ನೀರನ್ನು ಬಿಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ಥಳದಲ್ಲಿದ್ದ ನಗರಸಭೆಯ ಎಂಜಿನಿಯರ್ ಅರವಿಂದ್ ಅವರು, ತಮ್ಮ ಅಂದಾಜಿನ ಪ್ರಕಾರ ವೆಟ್ ವೆಲ್(ತ್ಯಾಜ್ಯನೀರು ಸಂಗ್ರಹಿಸುವ ತೊಟ್ಟಿ) ನಲ್ಲಿ ಯಾವುದೇ ಸೋರಿಕೆ ಇಲ್ಲವೆಂದೂ, ಅದರಲ್ಲಿ ಸಂಗ್ರಹವಾಗುತ್ತಿದ್ದ ಹೆಚ್ಚುವರಿ ತ್ಯಾಜ್ಯನೀರು ತಾನಾಗಿಯೇ ಹೊಳೆಗೆ ಹರಿಯುತ್ತಿತ್ತು ಎಂದೂ ಅಲ್ಲಿಗೆ ಭೇಟಿ ನೀಡಿದ ಅಧಿಕಾರಿಗಳಿಗೆ ತಿಳಿಸಿದರು. ತ್ಯಾಜ್ಯನೀರು ಏಕೆ ನದಿಯೊಳಗೆ ಸೇರುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಮೊದಲು ವೆಟ್ ವೆಲ್ಅನ್ನು ಖಾಲಿ ಮಾಡಿ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಒಪ್ಪಿಕೊಂಡರು.

ಅವರ ಸೂಚನೆಯ ಮೇರೆಗೆ, ಶನಿವಾರದಿಂದ ಎರಡು ದಿನಗಳ ಕಾಲ ವೆಟ್ ವೆಲ್ ಗೆ(ತ್ಯಾಜ್ಯನೀರು ಸಂಗ್ರಹಿಸುವ ತೊಟ್ಟಿ) ಬರುವ ಒಳಹರಿವನ್ನು ತಡೆಯಲಾಗುವುದು. ಈ ಅವಧಿಯಲ್ಲಿ, ವೆಟ್ ವೆಲ್ಅನ್ನು ಖಾಲಿ ಮಾಡಿ ಸ್ವಚ್ಛಗೊಳಿಸಲು ಅನುಕೂಲವಾಗುವಂತೆ, ತ್ಯಾಜ್ಯನೀರನ್ನು ವೆಟ್ ವೆಲ್ ಗೆ ಬಿಡದೆಯೇ ನೇರವಾಗಿ ಹೊಳೆಗೆ ಹರಿಯುವಂತೆ ತಿರುಗಿಸಲಾಗುವುದು.

ನಂತರ, ಅಧಿಕಾರಿಗಳು ಪರಿಶೀಲಿಸಿ, ಸಮಸ್ಯೆಗೆ ಕಾರಣವನ್ನು ಗುರುತಿಸಿ, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲಿ ತಂಝೀಮ್‌ನ ಪ್ರಧಾನ ಕಾರ್ಯದರ್ಶಿ ಅಜೀಜುರ್ ರೆಹಮಾನ್ ನದ್ವಿ, ತಂಝೀಮ್‌ನ ಪದಾಧಿಕಾರಿಗಳಾದ ವಕೀಲ ಇಮ್ರಾನ್ ಲಂಕಾ, ಬಿಲಾಲ್ ಕಮ್ರಿ, ಪುರಸಭೆ ಮಾಜಿ ಸದಸ್ಯ ಫಯಾಜ್ ಮುಲ್ಲಾ ಮುಂತಾದವರು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.