ಗ್ರಾಮೀಣ ಭಾಗಕ್ಕೆ ಹೆಚ್ಚುವರಿ ಬಸ್ ಸಂಚಾರಕ್ಕೆ ವಿದ್ಯಾರ್ಥಿಗಳ ಆಗ್ರಹ

KannadaprabhaNewsNetwork | Published : Jun 16, 2024 1:46 AM

ಸಾರಾಂಶ

ತಾಲೂಕಿನ ಗ್ರಾಮೀಣ ಭಾಗದಿಂದ ಶಿಕಾರಿಪುರ ಪಟ್ಟಣಕ್ಕೆ ಹೆಚ್ಚುವರಿ ಬಸ್ ಸಂಚಾರ ಆರಂಭಕ್ಕೆ ಆಗ್ರಹಿಸಿ ಶುಕ್ರವಾರ ಶಕ್ತಿ ಸಂಗ್ರಾಮ ವೇದಿಕೆ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟಿಸಿ ತಹಸೀಲ್ದಾರ್ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ತಾಲೂಕಿನ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸಲು ಗ್ರಾಮೀಣ ಸಾರಿಗೆ ಸಂಪರ್ಕದ ಸಮಸ್ಯೆಯಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ ಈ ಬಗ್ಗೆ ಸ್ಥಳೀಯ ಶಾಸಕರು ಸಂಸದರ ಸಹಿತ ಸರ್ಕಾರ ಕೂಡಲೇ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಕ್ತಿ ಸಂಗ್ರಾಮ ವೇದಿಕೆಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಶಕ್ತಿ ಸಂಗ್ರಾಮ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಶಿವಯ್ಯಶಾಸ್ತ್ರಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಶಿಕಾರಿಪುರ ತಾಲೂಕು ರಾಜ್ಯದಲ್ಲಿ ಅತಿ ವೇಗ ದಲ್ಲಿ ಅಭಿವೃದ್ಧಿ ಕಂಡಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನಾದ್ಯಂತ ರಸ್ತೆ, ಶಾಲಾ, ಕಾಲೇಜು ಸಹಿತ ಮೂಲಭೂತ ಸೌಲಭ್ಯ ದಿಂದ ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿ ಇದೀಗ ಪಟ್ಟಣದಲ್ಲಿನ ವಿವಿಧ ಕಾಲೇಜು ಶಾಲೆಗಳಿಗೆ ತೆರಳಲು ಸಕಾಲಕ್ಕೆ ಬಸ್‌ಗಳ ಕೊರತೆ ವಿಪರೀತವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬೆಳಿಗ್ಗೆ ದೂರದ ಗ್ರಾಮದಿಂದ ಸಕಾಲಕ್ಕೆ ಧಾವಿಸಲು ಸಾಧ್ಯವಾಗದೆ ಶೈಕ್ಷಣಿಕವಾಗಿ ಹಿನ್ನಡೆ ಯಾಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಡಿ ಮಹಿಳೆಯರು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಯೋಜನೆ ರೂಪಿಸಿದ ಸರ್ಕಾರ ಪೂರಕವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ತಪ್ಪಿದಲ್ಲಿ ಶಕ್ತಿ ಯೋಜನೆಯು ಅನಾವಶ್ಯಕ ಪ್ರಯಾಣಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದ ಅವರು, ತಾಲೂಕಿನ ಶಿರಾಳಕೊಪ್ಪ, ಮಂಚಿಕೊಪ್ಪ, ಕುಸ್ಕೂರು,ಕೋಡಿಕೊಪ್ಪ,ಹಿರೇಜಂಬೂರು,ನಾಗಿಭೋಗಿ,ಬೆಂಡೆಕಟ್ಟೆ,ಬೇಗೂರು,ಬೈರನಹಳ್ಳಿ,ಸಂಕ್ಲಾಪುರ, ಕೆಂಗಟ್ಟೆ, ಮುದ್ದನಹಳ್ಳಿ, ಇಟಗೆಹಳ್ಳಿ, ಎರೆಕಟ್ಟೆ, ಭದ್ರಾಪುರ, ನಂದಿಹಳ್ಳಿ ಮತ್ತಿತರ ಗ್ರಾಮದಿಂದ ಪಟ್ಟಣಕ್ಕೆ ಬಸ್ ಸಂಚಾರ ಕೂಡಲೇ ಆರಂಭಿಸಿ ಗ್ರಾಮದ ಮಹಿಳೆಯರು, ವೃದ್ಧರು, ಅಶಕ್ತರ ಸಹಿತ ಶಾಲಾ ಕಾಲೇಜು ವಿದ್ಯಾರ್ಥಿಗಳ ಭವಿಷ್ಯ ಮಸಕಾಗದಂತೆ ಜಾಗ್ರತೆ ವಹಿಸಬೇಕಾಗಿದೆ ಎಂದು ಆಗ್ರಹಿಸಿದರು.

ನಂತರದಲ್ಲಿ ತಹಸೀಲ್ದಾರ್ ಮೂಲಕ ಸಾರಿಗೆ ಸಚಿವರಿಗೆ,ಉಸ್ತುವಾರಿ ಸಚಿವರಿಗೆ,ಸಂಸದ,ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಬದಲ್ಲಿ ಶಕ್ತಿ ಸಂಗ್ರಾಮ ವೇದಿಕೆ ತಾ.ಅಧ್ಯಕ್ಷ ರವಿನಾಯ್ಕ ಮಣಿಕಂಠ,ಸುನೀಲ್,ಸಂತೋಷ,ತೇಜಪ್ಪ,ಚಂದ್ರನಾಯ್ಕ,ಗಿರೀಶ್ ನಾಯ್ಕ,ಭೂಮಿಕ,ಅನ್ನಪೂರ್ಣ,ಕಾವ್ಯಾ,ರಕ್ಷಿತ, ಐಶ್ವರ್ಯ,ಆದಿತ್ಯ,ಚಿರಂಜೀವಿ ಸಹಿತ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.

Share this article