ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ಸರ್ಕಾರದಲ್ಲಿ ಕೆ.ಶ್ರೀನಿವಾಸ್ ಮುಡಾ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ನೂತನ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಇದುವರೆಗೂ ಮುಡಾ ಅಧ್ಯಕ್ಷರ ಆಯ್ಕೆಗೆ ಒಲವು ತೋರಿರಲಿಲ್ಲ. ಇದೀಗ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮಂಡ್ಯ ಮುಡಾ ಅಧ್ಯಕ್ಷ-ಸದಸ್ಯರನ್ನು ನೇಮಿಸಿದೆ.
ಮೊದಲ ಬಾರಿಗೆ ನಗರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ನಹೀಂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಪಿ.ರವಿಕುಮಾರ್ ಅವರ ಪರವಾಗಿ ಶ್ರಮ ವಹಿಸಿ ಕೆಲಸ ಮಾಡಿದ್ದರು. ಮುಸ್ಲಿಂ ಮತಗಳು ಕಾಂಗ್ರೆಸ್ ಕಡೆಗೆ ಹರಿದುಬರುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜೊತೆಗೆ ಸಚಿವರಾದ ಎನ್.ಚಲುವರಾಯಸ್ವಾಮಿ, ಜಮೀರ್ ಅಹಮದ್, ಶಾಸಕ ಪಿ.ರವಿಕುಮಾರ್ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವುದರಿಂದ ನಹೀಂಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಲಭಿಸಿದೆ ಎಂದು ಹೇಳಲಾಗುತ್ತಿದೆ.ಚಿಕ್ಕ ವಯಸ್ಸಿನಲ್ಲೇ ಮುಡಾ ಅಧ್ಯಕ್ಷರಾಗುವ ಅವಕಾಶ ನಹೀಂ ಅವರಿಗೆ ಒದಗಿ ಬಂದಿದೆ. ನಗರಸಭೆಗೆ ಮೊದಲ ಬಾರಿಗೆ 5ನೇ ವಾರ್ಡ್‌ನಿಂದ ಚುನಾಯಿತರಾಗಿ ಆಯ್ಕೆಯಾಗಿರುವ ನಹೀಂ, ಅಂಬರೀಶ್ ಸಚಿವರಾಗಿದ್ದ ಸಮಯದಲ್ಲಿ ನಗರಸಭೆಗೆ ನಾಮ ನಿರ್ದೇಶನಗೊಂಡಿದ್ದರು. 2017ರ ಸೆಪ್ಟೆಂಬರ್‌ನಿಂದ ಜೂನ್ 2018ರವರೆಗೆ ಕಾಂಗ್ರೆಸ್‌ನ ಮುನಾವರ್ ಖಾನ್ ಅಧ್ಯಕ್ಷರಾಗಿದ್ದರು. ಅವರ ಬಳಿಕ ಮುಸ್ಲಿಂ ಸಮುದಾಯಕ್ಕೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಅವಕಾಶ ದೊರಕಿದೆ. ಇದೀಗ ನಗರಸಭೆ ಸದಸ್ಯ ಜವಾಬ್ದಾರಿಯ ಜೊತೆಗೆ ಮುಡಾ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯೂ ನಹೀಂಗೆ ದೊರಕಿದಂತಾಗಿದೆ.
‘ನನಗೆ ಚಿಕ್ಕ ವಯಸ್ಸಿನಲ್ಲೇ ಮುಡಾ ಅಧ್ಯಕ್ಷ ಸ್ಥಾನ ದೊರಕಿರುವುದು ಸಂತಸ ತಂದಿದೆ. ಸಚಿವರು, ಶಾಸಕರೆಲ್ಲರ ಸಹಕಾರದಿಂದ ಈ ಹುದ್ದೆ ನನಗೆ ಸಿಕ್ಕಿದ್ದು, ನನ್ನಿಂದ ಪ್ರಾಧಿಕಾರದ ಅಭಿವೃದ್ಧಿಗೆ ಹಾಗೂ ಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿಕೊಡುವುದಕ್ಕೆ ಬದ್ಧನಾಗಿದ್ದೇನೆ. ಎಲ್ಲರ ವಿಶ್ವಾಸ ಉಳಿಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತೇನೆ. ಬಕ್ರೀದ್ ಹಬ್ಬದ ಬಳಿಕ ಅಧಿಕಾರ ಸ್ವೀಕರಿಸುತ್ತೇನೆ.’
- ನಹೀಂ,ನೂತನ ಮುಡಾ ಅಧ್ಯಕ್ಷ