ನಿರಂತರ ಪರಿಶ್ರಮ ಜೊತೆ ವಿದ್ಯಾರ್ಥಿಗಳು ಕೌಶಲ್ಯ ಬೆಳೆಸಿಕೊಳ್ಳಿ

KannadaprabhaNewsNetwork | Published : Apr 18, 2024 2:24 AM

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಸಿಇಟಿ, ನೀಟ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.

ಕೂಡ್ಲಿಗಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಸಿಇಟಿ, ನೀಟ್ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಾದಲ್ಲಿ ಕೌಶಲ್ಯ ಬಹುಮುಖ್ಯ. ವಿದ್ಯಾರ್ಥಿಗಳು ನಿರಂತರ ಪರಿಶ್ರಮದ ಜೊತೆಗೆ ಕೌಶಲ್ಯ ಹೊಂದಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ಕೖಷ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಅವರು ಪಟ್ಟಣದ ಹೊರವಲಯದಲ್ಲಿರುವ ಜ್ಞಾನಮಂಟಪ ಸಂಸ್ಥೆಯ ಸುಜ್ಞಾನ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಿಇಟಿ ತರಭೇತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಸಿಇಟಿ ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹುಆಯ್ಕೆಯ ಉತ್ತರಗಳಲ್ಲಿ ಎರಡು ಆಯ್ಕೆಗಳು ಉತ್ತರಕ್ಕೆ ಬಹುಸಮೀಪ ಇರುವಂತೆ ಮಾಡಿ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯಗಳನ್ನು ಪರೀಕ್ಷೆ ಮಾಡುತ್ತಾರೆ. ಇಲ್ಲಿ ಎಡವಿದರೆ ವಿದ್ಯಾರ್ಥಿಗಳು ವರ್ಷಗಟ್ಟಲೇ ಓದಿದರೂ ಎಷ್ಟೇ ಪರಿಶ್ರಮಪಟ್ಟರೂ ಶ್ರಮ ವ್ಯರ್ಥ ಆಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಯುದ್ದ ಗೆದ್ದಷ್ಟೇ ಕಷ್ಟಪಡಬೇಕಾಗುತ್ತದೆ. ಸಿಇಟಿ, ನೀಟ್ ಪರೀಕ್ಷೆಗಳಲ್ಲಿ 1 ಲಕ್ಷ ಸ್ಥಾನಗಳಿಗೆ 15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಈಗಾಗಿ ಬಹಳ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಎಂಜಿನಿಯರ್, ವೈದ್ಯರು ಆಗುವ ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕಾಗುತ್ತದೆ ಎಂದರು.

ಜ್ಞಾನಮಂಟಪ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಉಮೇಶ್ ಮಾತನಾಡಿ, ದೊಡ್ಡ ನಗರಗಳಲ್ಲಿ ಸಿಇಟಿ, ನೀಟ್ ತರಬೇತಿಗಳು ನಡೆಯುತ್ತವೆ. ಆದರೆ ಗ್ರಾಮೀಣ ಭಾಗಗಳಲ್ಲಿ ನಡೆದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಇಲ್ಲಿಯ ವಿದ್ಯಾರ್ಥಿಗಳಿಗೆ ಸಿಇಟಿ ನೀಟ್ ಪರೀಕ್ಷೆ ಎದುರಿಸಲು ಉತ್ತಮ ತರಭೇತಿ ನೀಡಿದ್ದು ಸಾರ್ಥಕತೆಯಾಗಿದೆ ಎಂದರು.

ಹಲವು ದಿನಗಳ ಕಾಲ ವಿದ್ಯಾರ್ಥಿಗಳು ತರಬೇತಿ ಪಡೆದು ಸಂತೃಪ್ತಿ ಭಾವ ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೂಡ್ಲಿಗಿಯಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ತರಬೇತಿಗಳನ್ನು ಆಯೋಜಿಸಲಾಗುವುದು ಎಂದರು.

ಲೇಖಕ ಭೀಮಣ್ಣ ಗಜಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಜ್ಞಾನಮಂಪಟ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಿ.ಶ್ರೀಧರ, ಸಂಪನ್ಮೂಲ ವ್ಯಕ್ತಿ ರೋಷನ್ ಉಪಸ್ಥಿತರಿದ್ದರು. ಸಿಇಟಿ ತರಬೇತಿ ಪಡೆದ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು. 60ಕ್ಕೂ ಹೆಚ್ಚು ತರಬೇತಿ ಪಡೆದ ವಿದ್ಯಾರ್ಥಿಗಳು ಹಾಜರಿದ್ದರು.

Share this article