ಸ್ಪೂರ್ತಿ ಎನ್ಎಸ್ಎಸ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ
ಜ್ಞಾನವೆಂಬುದು ಸಂಪತ್ತು. ಹಣ ಒಮ್ಮೆ ಬರಬಹುದು, ಹೋಗಲು ಬಹುದು. ಆದರೆ ಜ್ಞಾನ ಒಮ್ಮೆ ನಿಮ್ಮೊಳಗೆ ಬಂದರೆ ಅದು ನಿರಂತರ ವೃದ್ದಿಯಾಗುತ್ತದೆ, ಹಾಗಾಗಿ ನೀವು ಜ್ಞಾನವಂತರಾಗಲು ಹೆಚ್ಚಿನ ಗಮನ ನೀಡಿ, ನಂತರ ಸಂಪತ್ತು ನಿಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಆಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಶಿವಚಿತ್ತಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸ್ಪೂರ್ತಿ ಎನ್ಎಸ್ಎಸ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಮ್ಮ ಗುರಿ ಏನೇ ಇರಲಿ. ಅದಕ್ಕೆ ತಕ್ಕದಾದ ಜ್ಞಾನವನ್ನು ಸಂಪಾದಿಸಿ, ಆಗ ಮಾತ್ರ ಸಮಾಜದಲ್ಲಿ ನಿಮಗೆ ಗೌರವ ದೊರೆಯುತ್ತದೆ ಎಂದರು.ನಿಮ್ಮ ತಂದೆ ತಾಯಿಗಳು ನಿಮ್ಮಿಂದ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅದರ ಜೊತೆಗೆ ನಿಮ್ಮ ಮುಂದೆ ಅನೇಕ ಆಕರ್ಷಣೆಗಳಿವೆ. ಬಾಹ್ಯ ಅಕರ್ಷಣೆಗಳಿಂದ ದೂರವಾದರೆ ಸಾಧನೆ ನಿಮ್ಮದಾಗುತ್ತದೆ. ಲಾಯರ್, ಎಂಜಿನಿಯರ್, ಉಪನ್ಯಾಸಕ, ರಾಜಕಾರಣಿಯಾಗಲು ಅವಕಾಶಗಳ ಬಾಗಿಲು ತೆರೆದಿದೆ. ಆಯ್ಕೆ ನಿಮ್ಮದು. ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಿ, ಇದಕ್ಕೆ ಪೂರಕವಾಗಿ ನಿಮ್ಮಗೆ ಎನ್ಎಸ್ಎಸ್, ರೆಡ್‌ಕ್ರಾಸ್, ಕಲೆ ಮತ್ತು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿವೆ. ಸರಿ ದಾರಿಯಲ್ಲಿ, ನಿರಂತರ ಪರಿಶ್ರಮದಿಂದ ಮುನ್ನಡೆದರೆ ವೇದಿಕೆಯ ಮುಂದಿರುವ ನೀವು, ಮುಂದೊಂದು ದಿನ ವೇದಿಕೆಯ ಮೇಲೆ ನಿಂತು, ನನ್ನಂತೆಯೇ ಸಾವಿರಾರು ಯುವಜನರಿಗೆ ಮಾರ್ಗದರ್ಶನ ಮಾಡಬಹುದು ಎಂದರು.
ಕಡು ಬಡತನದಲ್ಲಿಯೇ ಹುಟ್ಟಿ, ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿನ ನನ್ನನ್ನು ಇದುವರೆಗೂ ಸಾಕಿ, ಸಲಹಿರುವುದು ಈ ಜನಪದ ಸಂಗೀತ. ಬಡತನವೇ ನನ್ನ ಗುರು. ಕಾಲಲ್ಲಿ ಚಪ್ಪಲಿ ಇಲ್ಲದೆ ವೇದಿಕೆ ಹತ್ತಿ ಪ್ರಶಸ್ತಿ ಸ್ವೀಕರಿಸಿದ ದಿನಗಳು ನನ್ನನ್ನು ಏನಾದರೂ ಸಾಧಿಸುವ ಛಲ ಹುಟ್ಟು ಹಾಕಿದವು. ಅದರ ಫಲವಾಗಿ ರಾಷ್ಟ್ರಮಟ್ಟದ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದು ಅಂದಿನ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರಿಂದ ಒಂದು ಲಕ್ಷ ರು.ಗಳನ್ನು ಬಹುಮಾನವಾಗಿ ಪಡದೆ. ಆ ಸಾರ್ಥಕ ಕ್ಷಣಗಳನ್ನು ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಶಿಕ್ಷಣದ ಜೊತೆಗೆ, ಕಲೆಯನ್ನು ಮೈಗೂಡಿಸಿಕೊಳ್ಳಿ, ನಿಮ್ಮ ಜೀವನ ಬಂಗಾರವಾಗಲಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ. ಶೀಲಾ ಕೆ.ಪಿ., ದಿವ್ಯಾ, ಪಾವನಾ, ಶ್ವೇತಾ ಸಿ.ಎಸ್. ಮತ್ತಿತರರು ಪಾಲ್ಗೊಂಡಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.