ದೇವದಾರಿ ಬೆಟ್ಟದ ಮರ ಅಪ್ಪಿಕೊಂಡು ಪರಿಸರದ ಮಹತ್ವ ಸಾರಿದ ವಿದ್ಯಾರ್ಥಿಗಳು

KannadaprabhaNewsNetwork |  
Published : Nov 23, 2025, 02:30 AM IST
ಸ | Kannada Prabha

ಸಾರಾಂಶ

ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಸ್ಮರಣಾರ್ಥ ಗಿಡಗಳನ್ನು ನೆಟ್ಟು ನೀರುಣಿಸಿದರು.

ಸಂಡೂರು: ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಶನಿವಾರ ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಲಕ್ಷ್ಮೀ ಎಸ್. ನಾನಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು, ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರಿಂದ ನಮ್ಮ ನಡೆ ದೇವದಾರಿ ಅರಣ್ಯ ಉಳಿಸುವ ಕಡೆ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಈ ಅಭಿಯಾನದಲ್ಲಿ ಜನ ಸಂಗ್ರಾಮ ಪರಿಷತ್, ಭಾರತೀಯ ಸುರಾಜ್ಯ ಸಂಸ್ಥೆ, ರೈತ ಸಂಘ, ಸಮಾಜ ಪರಿವರ್ತನಾ ಸಮುದಾಯ ಹಾಗೂ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದೇವದಾರಿ ಬೆಟ್ಟದಲ್ಲಿನ ಮರಗಳನ್ನು ಅಪ್ಪಿಕೊಂಡು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದ್ದಲ್ಲದೆ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಸ್ಮರಣಾರ್ಥ ಗಿಡಗಳನ್ನು ನೆಟ್ಟು ನೀರುಣಿಸಿದರು.

ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಹರ್ಷವರ್ಧನ ಮಾತನಾಡಿ, ಒಂದು ಕಾಲದಲ್ಲಿ ಹಸಿರು ಕಿರೀಟ ಧರಿಸಿದ್ದ ಸಂಡೂರು ಇಂದು ಗಣಿಗಾರಿಕೆಯ ಧೂಳಿನಿಂದಾಗಿ ಬರಡಾಗುತ್ತಿದೆ. ನಾವು ಉಸಿರಾಡಲು ಸಹ ಶುದ್ಧ ಗಾಳಿಯಿಲ್ಲದಂತಾಗಿದೆ. ಈ ಪ್ರದೇಶ ಗಣಿಗಾರಿಕೆಯಿಂದ ನಲುಗಿದೆ. ಗಣಿಗಾರಿಕೆಯ ವಿಷಪೂರಿತ ವಾತಾವರಣದಿಂದ ಮಕ್ಕಳು ಅಸ್ತಮಾ ಮತ್ತು ಕ್ಷಯದಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ದೇವದಾರಿ ಅರಣ್ಯದ ಸಂಪತ್ತನ್ನು ಕಾಪಾಡಲು ನಾವೆಲ್ಲರೂ ಒಂದಾಗಬೇಕು ಎಂದು ತಿಳಿಸಿದರು.

ಪ್ರಶಿಕ್ಷಣಾರ್ಥಿ ಮುರಳಿಧರ ಎಂ.ಎಂ. ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಪರಿಸರ ಅಳುವಿನ ಅಂಚಿಗೆ ಬಂದು ನಿಂತಿದೆ. ಸಾವಿರಾರು ಮರಗಳ ಮಾರಣಹೋಮ ಮಾಡಿ ಯಾವ ಸಾರ್ಥಕತೆಗಾಗಿ ಗಣಿಗಾರಿಕೆ ಮಾಡಬೇಕಾಗಿದೆ? ಪರಿಸರ ಸಂಪತ್ತು ಇದ್ದಾಗ ಮಾತ್ರ ಮನುಕುಲ ಉಳಿಯಲು ಸಾಧ್ಯ ಎಂದರು.

ಜನಸಂಗ್ರಾಮ ಪರಿಷತ್ತಿನ ರಾಜ್ಯಾಧ್ಯಕ್ಷ ಟಿ.ಎಂ. ಶಿವಕುಮಾರ್ ಮಾತನಾಡಿ, ನಾವು ಆರೋಗ್ಯವಾಗಿರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕು. ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾನುಗಟ್ಟಲೆ ಮರಗಳನ್ನು ಧರೆಗುರುಳಿಸುವುದು ಯಾವ ನ್ಯಾಯ? ನೈಜವಾಗಿರುವ ಈ ಸುಂದರ ಪರಿಸರವನ್ನು ಕಾಪಾಡಿ ಬೆಳೆಸಬೇಕಾದದ್ದು ನಮ್ಮೆಲ್ಲರ ಹೊಣೆ. ಸರ್ಕಾರಗಳು ಮತ್ತು ಕೆಲವರು ಇಲ್ಲಿರುವಂತಹ ಸಂಪತ್ತನ್ನು ನಾಶ ಮಾಡಲು ಹೊರಟಿದ್ದಾರೆ. ದೇವದಾರಿ ಅರಣ್ಯ ನಾಶ ಮಾಡುವುದನ್ನು ತಡೆಯಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಮತ್ತು ಈ ಕುರಿತು ಜನರನ್ನೂ ಜಾಗೃತರನ್ನಾಗಿ ಮಾಡೋಣ ಎಂದು ತಿಳಿಸಿದರು.

ಪ್ರಶಿಕ್ಷಣಾರ್ಥಿ ವೀಣಾ ಮಾದಿನಾಳ್ ಹಾಗೂ ಜನಸಂಗ್ರಾಮ ಪರಿಷತ್ತಿನ ಮೂಲಿಮನಿ ವೀರಣ್ಣನವರು ಮಾತನಾಡಿ, ದೇವದಾರಿ ಅರಣ್ಯ ಪ್ರದೇಶ ವೈವಿಧ್ಯಮಯ ಜೀವಿಗಳ ತಾಣವಾಗಿದ್ದು, ದಟ್ಟಾರಣ್ಯದಿಂದ ಕೂಡಿದೆ. ಇದರ ಸಂರಕ್ಷಣೆಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜನಸಂಗ್ರಾಮ ಪರಿಷತ್ತಿನ ಜಿ ಕೆ ನಾಗರಾಜ್, ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಲಕ್ಷ್ಮಿ. ಎಸ್ ನಾನಾವಟೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ದೇವರಾಜ್ ಯು ಮತ್ತು ಸಮಾಜ ಪರಿವರ್ತನಾ ಸಮುದಾಯದ ಕಲೀಂ ಸೇರಿದಂತೆ ಹಲವರು ಮಾತನಾಡಿದರು.

ಜಾಗೃತಿ ಜಾಥಾ:

ಕಾರ್ಯಕ್ರಮದ ಪೂರ್ವಭಾವಿಯಾಗಿ, ಬಿ.ಎಡ್‌ಉಪನ್ಯಾಸಕರು ಮತ್ತು ಪ್ರಶಿಕ್ಷಣಾರ್ಥಿಗಳು, ಜನಸಂಗ್ರಾಮಪರಿಷತ್ ಪದಾಧಿಕಾರಿಗಳು ಹಾಗೂ ಸದಸ್ಯರು, ರೈತಮುಖಂಡರು, ಪರಿಸರವಾದಿಗಳು ನರಸಿಂಗಾಪುರ ಗ್ರಾಮದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿದರು.

ಪ್ರಶಿಕ್ಷಣಾರ್ಥಿಯಾದ ಬಿ ಡಿ ವೀರಪ್ಪಕಾರ್ಯಕ್ರಮವನ್ನು ನಿರೂಪಿಸಿದರು, ಚೈತ್ರ ಎಸ್. ಸ್ವಾಗತಿಸಿದರು ಮತ್ತು ಹುಲಿಗೆಮ್ಮ ಹೆಚ್ ವಂದಿಸಿದರು.

PREV

Recommended Stories

ಸತತ ಪರಿಶ್ರಮ, ಪ್ರಯತ್ನ ಗುರಿ ಮುಟ್ಟಲು ಸಾಧ್ಯ
ಡಿಕೆ ಸಿಎಂ ಆಗಲೆಂದು 1001ಈಡುಗಾಯಿ, ತುಲಾಭಾರ