ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದ್ದು: ಶಾಸಕ ಸಿ.ಪಿ. ಯೋಗೇಶ್ವರ್

KannadaprabhaNewsNetwork | Published : May 21, 2025 12:09 AM
ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು. ಅದೇ ರೀತಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಈಗ ನೀವು ಸಮಯ ವ್ಯರ್ಥ ಮಾಡಿದರೆ, ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಓದು, ಕ್ರೀಡೆ, ಎಲ್ಲದಕ್ಕೂ ಸಮಯ ಮೀಸಲಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಸ್ತು ರೂಢಿಸಿಕೊಳ್ಳಬೇಕು .
Follow Us

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ವಿದ್ಯಾರ್ಥಿಗಳ ಜೀವನ ತುಂಬಾ ಅಮೂಲ್ಯವಾಗಿದ್ದು, ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿ ಸಮಯ ವ್ಯರ್ಥ ಮಾಡದೇ ಸದುಪಯೋಗಪಡಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ೨೦೨೪- ೨೫ನೇ ಸಾಲಿನ ಸಾಂಸ್ಕೃತಿಕ, ಎನ್.ಎಸ್.ಎಸ್., ಎನ್.ಸಿ.ಸಿ., ಕ್ರೀಡೆ, ರೇವರ್ಸ್ ಮತ್ತು ರೇಂಜರ್ಸ್, ರೆಡ್ ಕ್ರಾಸ್ ಹಾಗೂ ಇತರೆ ಸಮಿತಿಗಳ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು. ಅದೇ ರೀತಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಈಗ ನೀವು ಸಮಯ ವ್ಯರ್ಥ ಮಾಡಿದರೆ, ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಓದು, ಕ್ರೀಡೆ, ಎಲ್ಲದಕ್ಕೂ ಸಮಯ ಮೀಸಲಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರ ಪ್ರಥಮ ದರ್ಜೆ ಕಾಲೇಜು ಇಡೀ ಜಿಲ್ಲೆಯಲ್ಲೇ ಉತ್ತಮ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಯ ಹಲವು ಭಾಗಗಳಿಂದ ಸಾಕಷ್ಟು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಉತ್ತಮ ಫಲಿತಾಂಶ ಹೊರಬರಲು ಕಾರಣೀಭೂತರಾಗಿದ್ದಾರೆ. ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಿದ ಉಪನ್ಯಾಸಕರಿಂದ ಹಿಡಿದು ವಿದ್ಯಾರ್ಥಿಗಳವರೆಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಏಕಾಗ್ರತೆಯಿಂದ ಪಾಠ ಕಲಿಯಬೇಕು. ಶಿಸ್ತು, ಸಂಯಮ, ಸಂಸ್ಕೃತಿ ರೂಢಿಸಿಕೊಂಡು ಪರಿಪೂರ್ಣ ಪ್ರಜೆಗಳಾಗಬೇಕು ಎಂದರು.

ಜಾನಪದ ವಿದ್ವಾಂಸ ಹಾಗೂ ಜಾನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ಜನಪದದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಅಳಿವಿನ ಅಂಚಿಗೆ ಸರಿಯುತ್ತಿರುವ ಜಾನಪದ ಕಲಾ ಪ್ರಕಾರಗಳನ್ನು ಅರ್ಥಮಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವನ್ನು ವಿದ್ಯಾರ್ಥಿ ದಿಸೆಯಿಂದಲೇ ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಉಷಾ ಮಾಲಿನಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳೇ ಹೆಚ್ಚಾಗಿ ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಉತ್ತಮ ಫಲಿತಾಂಶದ ಜೊತೆಗೆ ಪ್ರಗತಿಯನ್ನು ಹೊಂದುತ್ತಿದೆ. ಕಾಲೇಜಿನಲ್ಲಿ ಎಲ್ಲಾ ರೀತಿಯ ಸವಲತ್ತುಗಳು ಲಭ್ಯವಿದ್ದು, ಜಿಲ್ಲೆಗೆ ಮಾದರಿಯಾಗಿ ನಮ್ಮ ಕಾಲೇಜು ರೂಪುಗೊಳ್ಳುತ್ತಿರುವುದು ಹೆಮ್ಮೆ ಪಡುವ ಸಂಗತಿಯೆಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವಾಸಿಲ್ ಅಲಿಖಾನ್, ಸದಸ್ಯ ಸತೀಶ್ ಬಾಬು, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಜಗದೀಶ್ ನಡುವಿನಮಠ, ಎನ್‌ಎಸ್‌ಎಸ್ ಸಮಿತಿ ಸಂಚಾಲಕ ಡಾ.ನಾಗರಾಜು, ಡಾ.ಪುರುಷೋತ್ತಮ್, ಡಾ.ಅನಿತಾರಾವ್, ಡಾ.ಪ್ರಭು ಉಡಾಸೆ, ಡಾ.ಬೋರೇಗೌಡ, ಡಾ.ರಾಜಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ನಂಜುಂಡ, ಮುಜಾಹಿದ್ ಖಾನ್ ಸೇರಿದಂತೆ ಹಲವರು ಹಾಜರಿದ್ದರು.