ಕನ್ನಡಪ್ರಭ ವಾರ್ತೆ ಹಿರಿಯೂರುವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರಬೇಕು ಎಂದು ಆದಿ ಜಾಂಬವ ಮಠದ ಷಡಕ್ಷರ ಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯಷ್ಟೇ ಪೋಷಕರ ಸಲಹೆ ಮತ್ತು ಮಾರ್ಗದರ್ಶನ ಅವಶ್ಯಕತೆ ಇದೆ. ಆಗ ಮಾತ್ರ ವಿದ್ಯಾರ್ಥಿಗಳು ಕುಟುಂಬದ ಹಾಗೂ ಸಮಾಜದ ಆಸ್ತಿಯಾಗುತ್ತಾರೆ ಎಂದು ಶ್ರೀಗಳು ನುಡಿದರು.
ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡುವ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡಾ ಕ್ಷೇತ್ರದಲ್ಲಿ ಕೂಡ ತಮ್ಮ ಪ್ರತಿಭೆಯನ್ನು ತೋರಬೇಕು. ನಗರಸಭೆ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದಾಯಕ ಯೋಜನೆಗಳಿವೆ. ಅವುಗಳ ಮಾಹಿತಿ ಪಡೆದು ಅವುಗಳನ್ನು ಬಳಸಿಕೊಂಡು ಅದರ ಲಾಭ ಪಡೆದುಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು ಸಾಧನೆ ತೋರಿ ಆದರ್ಶಪ್ರಾಯರಾಗಬೇಕು. ಜೀವನವನ್ನು ಸರಿದಾರಿಯಲ್ಲಿ ನಡೆಸಲು ಮತ್ತು ಸಮರ್ಥವಾಗಿ ಎದುರಿಸಲು ಶಿಕ್ಷಣ ಸಹಕಾರಿಯಾಗುತ್ತದೆ. ಹಾಗಾಗಿ ಕಲಿಯುವ ಈ ವಯಸ್ಸಿನಿಂದಲೇ ಶ್ರದ್ಧೆ, ಏಕಾಗ್ರತೆಯಿಂದ ಅಭ್ಯಾಸ ಮಾಡಿ ಉನ್ನತ ಸ್ಥಾನ ಗಳಿಸಲು ಪ್ರಯತ್ನಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿ.ಎಸ್. ರಘುನಾಥ್, ಆಲೂರು ಹನುಮಂತರಾಯಪ್ಪ, ವಸಂತಕುಮಾರ್, ಜಾಫರ್ ಮುಂತಾದವರು ಹಾಜರಿದ್ದರು.