ವಿದ್ಯಾರ್ಥಿಗಳು ಸಕರಾತ್ಮಕ ಚಿಂತನೆಗಳಿಂದ ಮುನ್ನಡೆಯಿರಿ

KannadaprabhaNewsNetwork |  
Published : May 20, 2026, 01:15 AM IST
19ಕೆಆರ್ ಎಂಎನ್ 2.ಜೆಪಿಜಿರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 42ನೇ ಘಟಿಕೋತ್ಸವದಲ್ಲಿ ಗಣ್ಯರು ಪಾಲ್ಗೊಂಡಿರುವುದು. | Kannada Prabha

ಸಾರಾಂಶ

ರಾಮನಗರ: ಈಗ ನೀವೆಲ್ಲರು ಪದವೀಧರರಾಗುತ್ತಿದ್ದೀರಿ. ನಕರಾತ್ಮಕ ಚಿಂತನೆಗಳೊಂದಿಗೆ ಹೋಗಬೇಡಿ. ಸಕರಾತ್ಮಕ ಮತ್ತು ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಿರಿ ಎಂದು ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಕಿವಿಮಾತು ಹೇಳಿದರು

ರಾಮನಗರ: ಈಗ ನೀವೆಲ್ಲರು ಪದವೀಧರರಾಗುತ್ತಿದ್ದೀರಿ. ನಕರಾತ್ಮಕ ಚಿಂತನೆಗಳೊಂದಿಗೆ ಹೋಗಬೇಡಿ. ಸಕರಾತ್ಮಕ ಮತ್ತು ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಿರಿ ಎಂದು ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಗೌರವ ಕಾರ್ಯದರ್ಶಿ ಉಮರ್ ಇಸ್ಮಾಯಿಲ್ ಖಾನ್ ಕಿವಿಮಾತು ಹೇಳಿದರು.

ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 42ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ನಿಮ್ಮ ವೈಯಕ್ತಿಕ ನಡವಳಿಕೆಗೆ ಆದ್ಯತೆ ಕೊಡಿ. ನಿಮ್ಮ ಆರ್ಥಿಕ ಸ್ಥಿರತೆ, ಕುಟುಂಬದ ಬಗ್ಗೆ ಸದಾ ಕಾಳಜಿ ವಹಿಸುತ್ತಾ ನಿಮ್ಮ ಏಳಿಗೆಗೂ ಶ್ರಮವಹಿಸಿ. ಆ ಮೂಲಕ ಸಮಾಜಕ್ಕೆ ಒಳಿತು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉನ್ನತಿಗೆ ಬರಲು ಶಾರ್ಟ್ ಕಟ್ ಬೇಡ:

ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ ನ ಆಡಳಿತ ಮಂಡಳಿ ಅಧ್ಯಕ್ಷ ಡಾ.ತನ್ವೀರ್ ಹಕ್ ಮಾತನಾಡಿ, ಕಷ್ಟಗಳನ್ನು ಎದುರಿಸದೆ, ಸೋಲುಗಳನ್ನು ಕಾಣದೆ ಜೀವನವೇ ಇಲ್ಲ. ನೀವು ಮೆಟ್ಟಿಲುಗಳನ್ನು ಹಂತ ಹಂತವಾಗಿ ಏರಬೇಕು. ಬೇಗ ಉನ್ನತಿಗೆ ಬರಬೇಕು ಎಂದು ನೀವು ಎಷ್ಟು ಶಾರ್ಟ್ ಕಟ್ ತೆಗೆದುಕೊಳ್ಳುತ್ತೀರೊ ಅಷ್ಟು ಬೇಗ ಕೆಳಗೆ ಬೀಳುತ್ತೀರಿ. ಆದ್ದರಿಂದ ಆರಂಭದಿಂದಲೇ ಎಲ್ಲವನ್ನು ಸರಿಯಾಗಿ ಕಲಿಯಬೇಕು ಎಂದು ಎಚ್ಚರಿಸಿದರು.

ಈಗ ಜೀವನವೆಂದರೆ ಒಂದು ಸವಾಲು. ನೀವು ಅದನ್ನು ಧೈರ್ಯದಿಂದ ಎದುರಿಸಬೇಕು. ಈಗ ನೀವು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ನೀವು ಮೂಲ ಅಡಿಪಾಯವನ್ನು ನಿರ್ಮಿಸಿದ್ದೀರಿ. ಅಸಾಧ್ಯವಾದುದನ್ನು ಎಲ್ಲವನ್ನು ನೀವು ಸಾಧಿಸಬಹುದು ಎಂದು ನಂಬುವ ಕನಸು ಕಾಣಿರಿ ಮತ್ತು ಅದಕ್ಕಾಗಿ ಶ್ರಮಿಸಿರಿ ಎಂದು ಕರೆ ನೀಡಿದರು.

ಬಹಳಷ್ಟು ಜನರು ಕನಸೂ ಕಾಣದಂತಹ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯಬೇಡಿ. ನಿಮ್ಮಲ್ಲಿ ಎಲ್ಲಾ ಸಾಮರ್ಥ್ಯ ಇದೆ. ದೇವರು ನಮಗೆಲ್ಲರಿಗೂ ಒಂದೇ ರೀತಿಯ ಬುದ್ಧಿ ಮತ್ತು ಏಕಾಗ್ರತೆ ನೀಡಿದ್ದಾನೆ. ಆದರೆ ನಿಮ್ಮ ಸಮರ್ಪಣೆ, ಸಹನೆ ಮತ್ತು ಗುರಿಯತ್ತದ ದೃಷ್ಟಿಯೇ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ನೀವು ಎಷ್ಟು ಬಾರಿ ಬೀಳುತ್ತೀರೋ ಅಷ್ಟು ಬಲವಾಗಿ ಮತ್ತೆ ಎದ್ದೇಳುತ್ತೀರಿ. ಆದ್ದರಿಂದ ಎಂದಿಗೂ ನಿರುತ್ಸಾಹಗೊಳ್ಳಬೇಡಿ ಎಂದರು.

ನೀವು ಇತರರಿಗೆ ಮಾದರಿಯಾಗಿರಬೇಕು. ನಿಮ್ಮ ಕುಟುಂಬದಿಂದ ಹಿಡಿದು ಸಹೋದ್ಯೋಗಿಗಳವರೆಗೆ, ನಿಮ್ಮೊಂದಿಗೆ ಇರುವ ಪ್ರತಿಯೊಬ್ಬರೂ ನಿಮ್ಮನ್ನು ನೋಡಿ ನಾನೂ ಇವರಂತೆ ಆಗಬೇಕು; ಇಂತಹ ಒಳ್ಳೆಯ ವ್ಯಕ್ತಿಯಾಗಬೇಕು, ಒಳ್ಳೆಯ ಮಾನವನಾಗಬೇಕು ಎಂದು ಹೇಳುವಂತೆ ಇರಬೇಕು. ಶ್ರೀಮಂತರೋ, ಬಡವರೋ, ಯಾವ ಧರ್ಮದವರೋ, ಯಾವ ವರ್ಗದವರೋ ಎಂಬ ವ್ಯತ್ಯಾಸ ನಿಮ್ಮಲ್ಲಿ ಬಾರದಿರಲಿ. ಹಿಂದೆ ಉಳಿದವರಿಗೆ ಸೂಕ್ತ ಮಾರ್ಗದರ್ಶನ ಕೊಡಿ, ನೀವು ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ ಪ್ರತಿಫಲ ಸಿಗುತ್ತದೆ ಎಂದು ಡಾ.ತನ್ವೀರ್ ಹಕ್ ಹೇಳಿದರು.

ಇದೇ ವೇಳೆ 2022 - 26ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ಹಾಗೂ ಪಿಎಚ್ ಡಿ ಪಡೆದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಕುಮಾರ್, ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಡಾ.ನವಾಜ್ ಎ ಷರೀಫ್, ಟ್ರಸ್ಟಿಗಳಾದ ಇಕ್ಬಾಲ್ ಅಹಮದ್ ಬೇಗ್, ಡಾ.ವಸೀಂ ಖಾನ್, ಕಾಲೇಜು ಆಡಳಿತಾಧಿಕಾರಿ ಪ್ರೊ.ಏಜಾಜ್ ಅಹಮದ್, ಸಂಚಾಲಕ ಡಾ.ಜಾವಿದ್ ಅಖ್ತಾರ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ...................

ಕಠಿಣ ಪರಿಶ್ರಮ, ಕನಸುಗಳು ಮತ್ತು ಸರ್ವಶಕ್ತನ ಮೇಲಿನ ನಂಬಿಕೆ ಹೊರತುಪಡಿಸಿ ಇನ್ನಾವುದೂ ನಿಮ್ಮನ್ನು ಮೇಲಕ್ಕೆತ್ತುವುದಿಲ್ಲ. ಸಾಧನೆಗೆ ಯಾವುದೇ ಅಡ್ಡದಾರಿ ಇಲ್ಲ. ಇದು ನಿಮ್ಮ ಜೀವನದ ಯಶಸ್ಸಿನ ಮಂತ್ರವಾಗಲಿ. ಕಷ್ಟದಿಂದಲೇ ಜೀವನದಲ್ಲಿ ಹಂತ ಹಂತವಾಗಿ ಮೇಲೆ ಬಂದ ಅಬ್ದುಲ್ ಕಲಾಂರವರು ಭಾರತದ ರಾಷ್ಟ್ರಪತಿಗಳಾದರು. ಇದಕ್ಕಿಂತ ದೊಡ್ಡ ಸಾಧನೆ ಇನ್ನೇನು ಬೇಕು? ಅವರನ್ನು ಆದರ್ಶವಾಗಿ ಇಟ್ಟುಕೊಳ್ಳಿ.

-ಡಾ.ತನ್ವೀರ್ ಹಕ್, ಅಧ್ಯಕ್ಷರು, ಗೌಸಿಯಾ ತಾಂತ್ರಿಕ ಮತ್ತು ಶೈಕ್ಷಣಿಕ ಟ್ರಸ್ಟ್ ನ ಆಡಳಿತ ಮಂಡಳಿ

19ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ 42ನೇ ಘಟಿಕೋತ್ಸವದಲ್ಲಿ ಗಣ್ಯರು ಪಾಲ್ಗೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇವಲ 5 ತಿಂಗಳಿಗೇ ಜಿಲ್ಲಾಧಿಕಾರಿ ವರ್ಗಾವಣೆ
ನಗರಕ್ಕೆ ಶೀಘ್ರ 5 ಹೊಸ ಮಿನಿ ಕೆಎಸ್‌ಆರ್‌ಟಿಸಿ ಬಸ್‌