ವಿದ್ಯಾರ್ಥಿಗಳಿಗೆ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಅಗತ್ಯ: ಸಿಡಿಪಿಒ ಮುನಿರಾಜು

KannadaprabhaNewsNetwork | Published : Aug 2, 2024 12:46 AM

ಸಾರಾಂಶ

ಈ ಹಿಂದೆ ಮಕ್ಕಳು ಮತ್ತು ಮಹಿಳೆಯರಿಗೆ ಪ್ರಾಮುಖ್ಯತೆ ಇರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಪೋಕ್ಸೋ ಕಾಯ್ದೆಯಲ್ಲಿ ಅಪರಾಧಿಗಳಿಗೆ ಹೆಚ್ಚಿನ ಪ್ರಮಾಣದ ಶಿಕ್ಷೆ ಇದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪೋಕ್ಸೋ ಕಾಯ್ದೆಯ ತಿಳುವಳಿಕೆಯಿಲ್ಲದೆ 16 ರಿಂದ 20 ವರ್ಷದೊಳಗಿನವರು ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಮಕ್ಕಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ( ಪೋಕ್ಸೋ) ಕಾಯ್ದೆ- 2012 ರ ಅರಿವು ಅವಶ್ಯಕ ಎಂದು ಸಿಡಿಪಿಒ ಮುನಿರಾಜು ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಸಿಡಿಪಿಒ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೋ) ಕಾಯ್ದೆ ಹಾಗೂ ಬಾಲ್ಯ ವಿವಾಹ, ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಲೈಂಗಿಕ ಅಪರಾಧದಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸಹ ಬಲಿಪಶುಯಾಗಿರುವ ಪ್ರಕರಣಗಳು ಇವೆ, ಆದರಿಂದ ಈ ಕಾಯ್ದೆಯ ಬಗ್ಗೆ ಗಂಡು/ ಹೆಣ್ಣು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎರಡು ಬೇರೆ. ಎರಡಕ್ಕೂ ಸಹ ವ್ಯತ್ಯಾಸ ಇದೆ. ಕಾಯ್ದೆಯಲ್ಲಿ ಪ್ರತಿಯೊಂದಕ್ಕೂ ಶಿಕ್ಷೆ ಇದೆ ಎಂದರು.

ಈ ಹಿಂದೆ ಮಕ್ಕಳು ಮತ್ತು ಮಹಿಳೆಯರಿಗೆ ಪ್ರಾಮುಖ್ಯತೆ ಇರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಪೋಕ್ಸೋ ಕಾಯ್ದೆಯಲ್ಲಿ ಅಪರಾಧಿಗಳಿಗೆ ಹೆಚ್ಚಿನ ಪ್ರಮಾಣದ ಶಿಕ್ಷೆ ಇದೆ ಎಂದರು.

ನಮ್ಮ ಜಿಲ್ಲೆಯಲ್ಲಿ ಇರುವ ಸರ್ಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳು ಅನುದಾನಿತ ಶಾಲೆಗಳಲ್ಲಿ ಅರಿವನ್ನು ಮೂಡಿಸಿಕೊಂಡು ಬರುತ್ತಿದ್ದೇವೆ, ಇತ್ತೀಚೆಗೆ ಪೋಕ್ಸೋ ಪ್ರಕರಣಗಳು ಅತೀ ಹೆಚ್ಚು ಬರುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ 76 ಪೋಕ್ಸೋ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ತಾಲೂಕಿನಲ್ಲಿ 10 ಪೋಕ್ಸೋ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇಂತಹ ಯಾವುದೇ ಒಂದು ಸಮಸ್ಯೆಗಳಿಗೆ ಅವಕಾಶ ನೀಡಬಾರದೆಂದು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಉಪ ಪ್ರಾಂಶುಪಾಲರಾದ ನಾಗರಾಜ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜಣ್ಣ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share this article