ಲಕ್ಷ್ಮೇಶ್ವರ: ತಂತ್ರಜ್ಞಾನದ ಶಿಕ್ಷಣ ಈಗ ಆಧುನಿಕ ಜಗತ್ತನ್ನು ಆಳುತ್ತಿದ್ದು, ಇದರ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ, ಏಕಾಗ್ರತೆ ರೂಢಿಸಿಕೊಂಡು ಸತತಾಭ್ಯಾಸದ ಮೂಲಕ ಉನ್ನತ ಗುರಿ ಸಾಧಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಶಿಗ್ಲಿಯ ಪರಮೇಶ್ವರಪ್ಪ ಬಳಿಗಾರ ಸರ್ಕಾರಿ ಪಪೂ ಕಾಲೇಜಿನಲ್ಲಿ ಇತ್ತೀಚೆಗೆ ಪ್ರಸಕ್ತ ಸಾಲಿನಲ್ಲಿ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ, ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಳಿಗಾರ ಕುಟುಂಬದಿಂದ ಕೊಡ ಮಾಡುವ ₹೧ ಲಕ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠವಾದುದನ್ನು ಸಾಧಿಸಲು ಏಕಾಗ್ರತೆಯಿಂದ ಶ್ರಮಿಸಬೇಕು. ನಮ್ಮ ಭವಿಷ್ಯದ ರೂವಾರಿಗಳು ನಾವೇ ಆದ್ದರಿಂದ ಉನ್ನತ, ಶಿಕ್ಷಣ, ಜ್ಞಾನ ಮತ್ತು ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂದುಕೊಂಡ ಗುರಿ ಸಾಧಿಸಲು ಶಿಸ್ತು ಅಳವಡಿಸಿಕೊಳ್ಳಬೇಕು. ಸಾಧನೆ ಸಾಧಕನ ಸ್ವತ್ತಾಗಿದ್ದು, ಪಿಯು ಶಿಕ್ಷಣವನ್ನು ತಪಸ್ಸಿನ ರೀತಿಯಲ್ಲಿ ಮಾಡಿ ಸಾಧನೆಯ ಗುರಿಯಿಂದ ಸಾಗಿದರೆ ಉತ್ತಮ ಭವಿಷ್ಯ ನಿಮ್ಮದಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭ್ಯಾಸದೊಂದಿಗೆ ಶಿಸ್ತುಬದ್ಧ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಇದ್ದು, ಅವರನ್ನು ಸಮಾಜಕ್ಕೆ ಆದರ್ಶರನ್ನಾಗಿ ರೂಪಿಸಬೇಕು ಎಂದರು.ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ವಿದ್ಯೆಯ ಜತೆಗೆ ವಿನಯವು ವಿದ್ಯಾರ್ಥಿಗಳಲ್ಲಿ ಅವಶ್ಯಕವಾಗಿ ಬೆಳೆದು ಬರಬೇಕು. ಗುರು-ಹಿರಿಯರು, ತಂದೆ ತಾಯಿಯರನ್ನು ಗೌರವದಿಂದ ಕಾಣಬೇಕು. ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಸಾಧನೆಯ ತುಡಿತದತ್ತ ಸಾಗಬೇಕು. ವಿದ್ಯಾರ್ಥಿ ಮತ್ತು ಯುವ ಶಕ್ತಿ ನಾಡಿನ ಸಂಪತ್ತಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಎಸ್.ಟಿ. ಮುದಿಗೌಡರ ಅಧ್ಯಕ್ಷತೆವಹಿಸಿ ಮಾತನಾಡಿದರು. ನಾಗರಾಜ ದ್ಯಾಮನಕೊಪ್ಪ, ಎನ್.ಎನ್. ನೆಗಳೂರ, ನಿವೃತ್ತ ಪ್ರಾಚಾರ್ಯ ಡಿ.ಪಿ. ಹೇಮಾದ್ರಿ, ಭರತ್ ಬಳಿಗಾರ, ಮಂಜುನಾಥ ದೇಸಾಯಿ, ಶ್ರೀನಿವಾಸ ಬದಾಮಿ, ನಟರಾಜ ಪವಾಡದ, ರವಿ ಕುಸನೂರ, ಗೋವಿಂದಸಾ ಬದಿ, ಬಸವರಾಜ ಡಂಬ್ರಳ್ಳಿ, ಮಾಂತೇಶ ತಳವಾರ ಇದ್ದರು.