ಕನ್ನಡ ಪ್ರಭ ವಾರ್ತೆ ಮದ್ದೂರು
ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆದರೆ ಸಾಲದು. ವೃತ್ತಿ ಕೌಶಲ್ಯತೆಯ ತರಬೇತಿ ಪಡೆದುಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ತಾಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆ ಮತ್ತು ಪ್ರಯೋಗ್ ಸಹಯೋಗದಲ್ಲಿ ನಿರ್ಮಿಸಿರುವ ವಿಜ್ಞಾನ ಪ್ರಯೋಗ ಶಾಲೆ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ವಿದ್ಯೆಯ ರಕ್ಷಣಾ ಕವಚವಾಗಿದೆ. 40 ವರ್ಷಗಳ ಹಿಂದೆ ಇದ್ದ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಆಗ ಓದುವುದು, ಬರೆಯುವುದು ಪದವಿಗಳನ್ನು ಪಡೆಯುವುದಕ್ಕೆ ಅಷ್ಟೆ ಸೀಮಿತವಾಗಿತ್ತು. ಆದರೆ, ಈಗ ಜಗತ್ತಿನಲ್ಲಿ ಎಲ್ಲವು ಬದಲಾಗುತ್ತ ಸಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆದರೇ ಸಾಲದು ವೃತ್ತಿ ಕೌಶಲ್ಯತೆಯ ತರಬೇತಿ ಪಡೆದುಕೊಳ್ಳುವುದರ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ತಯಾರಿಯಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.ಈ ಹಿಂದಿನ ದಿನಗಳಲ್ಲಿ ಈ ರೀತಿ ಉತ್ತಮವಾದ ಪ್ರಯೋಗಾಲಯಗಳು ನಗರ ಪ್ರದೇಶಗಳಿಗಷ್ಟೆ ಸೀಮೀತವಾಗಿದ್ದವು. ಆದರೆ, ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಇಂತಹ ಸೌಲಭ್ಯವಿರಲಿಲ್ಲ. ಹೀಗಾಗಿ ಪರೀಕ್ಷೆಗಳಲ್ಲಿ ಅಂಕಗಳಿಸುವುದು ಮುಖ್ಯವಾದರು ಅಂತಿಮವಾಗಿ ಅಂಕಗಳಿಕೆಯೇ ಶಿಕ್ಷಣದ ಮೂಲ ಗುರಿಯಾಗಬಾರದು. ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಬೇಕೆಂದರು.
ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಎಸ್.ಎಂ ಕೃಷ್ಣ ರವರಂತ ಮಹಾನ್ ವ್ಯಕ್ತಿಗಳು ವಿದ್ಯಾಭ್ಯಾಸ ಮಾಡಿದ ಸೋಮನಹಳ್ಳಿ ವಿದ್ಯಾ ಸಂಸ್ಥೆಯಲ್ಲಿ ಕರಣ್ ಅವರ ಆಸಕ್ತಿಯಿಂದ ರಾಜ್ಯ ಮಟ್ಟದ ಸುಸಜ್ಜಿತ ವಿಜ್ಞಾನ ಪ್ರಯೋಗ ಶಾಲೆಯನ್ನು ಸಂಸ್ಥೆಯಲ್ಲಿ ಆರಂಭಿಸಿರುವುದು ಸ್ವಾಗತಾರ್ಹವೆಂದರು.ಅತ್ಯಂತ ಕಡಿಮೆ ಶುಲ್ಕದಿಂದ ಅತ್ಯುನ್ನತ ಶಿಕ್ಷಣವನ್ನು ನೀಡುವ ಪರಿಕಲ್ಪನೆಯಿಂದ ಸಿಬಿಎಸ್ಸಿ ಪ್ರೌಢಶಾಲೆಯನ್ನು ಆರಂಭಿಸಿರುವುದು ಒಂದು ಹೊಸ ಆಲೋಚನೆಯಾಗಿದ್ದು, ಇದರಿಂದ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಯ, ವಿನಯ ಬೆಳೆಸಿಕೊಳ್ಳಬೇಕು ಸಾಮಾಜಿಕ ಜಾಲತಾಣಗಳಿಂದ ದೂರು ಉಳಿದು ವೃತ್ತಿ ಕೌಶಲ್ಯ ಬೆಳೆಸಿಕೊಳ್ಳಬೇಕು ಮತ್ತು ತಾವು ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆ ಹಾಗೂ ಪೋಷಕರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಬೆಳೆಯಬೇಕು ಎಂದರು.ಇದೇ ವೇಳೆ ಪ್ರಯೋಗ್ ಸಂಸ್ಥೆಯ ಮುಖ್ಯಸ್ಥ ಕರಣ್, ಸಂಸ್ಥೆಯ ಛೇರ್ಮನ್ ಟಿ.ವಿ.ರಾಜು, ಬಿಇಒ ಧನಂಜಯ, ಸಂಸ್ಥಾಪಕ ಎಚ್.ಎಸ್. ನಾಗರಾಜ್, ನಿರ್ದೇಶಕ ಡಾ.ಕೆ.ಎಸ್.ನಾಗಭೂಷಣ್, ಆಡಳಿತಾಧಿಕಾರಿ ಮುರಳಿ ಮೋಹನ್, ಡಾ.ಆನಂದ, ಡಾ.ವಿಷ್ಣುಕಾಂತ್ ಸೇರಿದಂತೆ ಸಂಸ್ಥೆಯ ವಿವಿಧ ಭಾಗಗಳ ಸದಸ್ಯರು ಇದ್ದರು.