ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಒಟ್ಟು 3791 ವಿದ್ಯಾರ್ಥಿಗಳು ಪರೀಕ್ಷೆಗೆ ಸನ್ನದ್ಧರಾಗಿದ್ದಾರೆ, ಎಲ್ಲರೂ ನಿರ್ಭೀತಿಯಿಂದ ಪರೀಕ್ಷೆಯನ್ನು ಎದುರಿಸುವಂತಾಗಬೇಕು ಎಂದು ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ತಿಳಿಸಿದರು.ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಸಾರಿಗೆ ಸೇರಿದಂತೆ ಇನ್ನಿತರ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ. ಈ ಬಾರಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ನಿಗಾ ವಹಿಸಬೇಕಾಗಿದೆ ಎಂದು ಹೇಳಿದರು.ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ ಮಾತನಾಡಿ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 1755 ಹೆಣ್ಣು ಮತ್ತು 1911 ಗಂಡು ಸೇರಿದಂತೆ ಒಟ್ಟು 3666 ವಿದ್ಯಾರ್ಥಿಗಳು ಹಾಗೂ 51 ಪುನರಾವರ್ತಿತ ಅಭ್ಯರ್ಥಿಗಳು, 74 ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 3791 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ನಗರದಲ್ಲಿ 5 ಮತ್ತು ಗ್ರಾಮೀಣ ಭಾಗದಲ್ಲಿ 9 ಸೇರಿದಂತೆ ಒಟ್ಟು 14 ಪರೀಕ್ಷಾ ಕೇಂದ್ರಗಳು ಹಾಗೂ 391 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯ ವತಿಯಿಂದ ಎಲ್ಲ ವ್ಯವಸ್ಥೆಗಳನ್ನು ಸನ್ನದ್ಧಗೊಳಿಸಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಬೆಸ್ಕಾಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಆರೋಗ್ಯ, ಸಾರಿಗೆ, ನಗರಸಭೆ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಪರೀಕ್ಷೆಯು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ನಕಲನ್ನು ತಡೆಯಲು ಇಲಾಖೆಯ ವತಿಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದು, ವಿವಿಧ ಸ್ಥರದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಉತ್ತಮ ಫಲಿತಾಂಶ ಪಡೆಯಬೇಕಾಗಿದೆ ಎಂದು ಹೇಳಿದರು.ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಗಂಗರೆಡ್ಡಿ, ಇಸಿಒ ಲೋಕೇಶ್, ಕೃಪಾ, ಕೃಷ್ಣಕುಮಾರ್, ನಗರಸಭೆ ಆಯುಕ್ತೆ ಡಿ.ಎಂ.ಗೀತಾ, ಸಮಾಜ ಕಲ್ಯಾಣ ಇಲಾಕೇಯ ಗ್ರೇಡ್ 1 ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ನಾಯ್ಕರ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ನಾರಾಯಣಪ್ಪ, ಬಿಸಿಎಂ ಅಧಿಕಾರಿ ವನಜಾಕ್ಷಿ, ಟಿಎಚ್ಒ ಡಾ.ಚಂದ್ರಮೋಹನ್ ರೆಡ್ಡಿ, ಬೆಸ್ಕಾಂ ಎಇಇ ಎಂ.ಆರ್.ಪರಮೇಶ್ವರಪ್ಪ, ಪಿಎಸೈ ರಮೇಶ್ ಗುಗ್ಗಿರಿ, ಪಿಡಿಒ ಶ್ರೀನಿವಾಸ್ ಸೇರಿದಂತೆ ತಾಲೂಕಿನ ಎಲ್ಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.