ಸಮರ್ಪಕ ಬಸ್‌ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : Sep 19, 2024, 02:00 AM ISTUpdated : Sep 19, 2024, 02:01 AM IST
18ಎಚ್ಎಸ್ಎನ್16 : ಹೊಳೆನರಸೀಪುರದ ಕೆಎಸ್‌ಆರ್‌ಟಿಸಿ ಘಟಕದ ಮುಂದೆ ಹಳ್ಳಿಮೈಸೂರು ಹೋಬಳಿ ಭಾಗದ ವಿದ್ಯಾರ್ಥಿಗಳು ಅಗತ್ಯ ಸಮಯದಲ್ಲಿ ಬಸ್ಸಿಲ್ಲ, ಬರುವ ಬಸ್ ನಿಲ್ಲಿಸುತ್ತಿಲ್ಲ, ಚಾಲಕ ನಿರ್ವಾಹಕರ ವರ್ತನೆ ಸರಿಯಿಲ್ಲವೆಂದು ಪ್ರತಿಭಟಿಸಿದರು. | Kannada Prabha

ಸಾರಾಂಶ

ಹೊಳೆನರಸೀಪುರ ಪಟ್ಟಣದಿಂದ ಎಸ್.ಅಂಕನಹಳ್ಳಿ, ಆಲಗೌಡನಹಳ್ಳಿ, ಚಿಕ್ಕಕಾಡನೂರು, ಸಿ.ಹಿಂದಲಹಳ್ಳಿ, ದಾಳಗೌಡನಹಳ್ಳಿ, ಮೂಡಲಕೊಪ್ಪಲು, ಕಲ್ಲಹಳ್ಳಿ, ಹಳ್ಳಿಮೈಸೂರು ಮಾರ್ಗ ಮತ್ತು ಪಟ್ಟಣದಿಂದ ದೊಡ್ಡಕಾಡನೂರು, ನಗರನಹಳ್ಳಿ ಮಾರ್ಗವಾಗಿ ಗ್ರಾಮೀಣ ಸಾರಿಗೆ ಬಸ್ಸುಗಳೇ ಇಲ್ಲ. ಈ ಭಾಗದ ವಿದ್ಯಾರ್ಥಿಗಳು ಹೋಬಳಿ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಗೆ ವ್ಯಾಸಂಗ ಮಾಡಲು ದಿನನಿತ್ಯ ನೂರಾರು ವಿದ್ಯಾರ್ಥಿಗಳು ತೆರಳುತ್ತಿದ್ದು, ಬಸ್ಸುಗಳಿಲ್ಲದೆ ಶಾಲಾ ಕಾಲೇಜುಗಳಿಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಬರುತ್ತಿದ್ದ ಬಸ್ಸುಗಳನ್ನು ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅಗತ್ಯ ಸಮಯದಲ್ಲಿ ಬಸ್ ವ್ಯವಸ್ಥೆ ಇಲ್ಲದೇ ಕಳೆದ ನಾಲ್ಕು ತಿಂಗಳಿಂದ ಅನುಭವಿಸುತ್ತಿದ್ದ ಹಿಂಸೆ ತಾಳಲಾರದೇ ಸಹನೆ ಕಳೆದುಕೊಂಡ ವಿದ್ಯಾರ್ಥಿಗಳು ಬುಧವಾರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕದ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದಿಂದ ಎಸ್.ಅಂಕನಹಳ್ಳಿ, ಆಲಗೌಡನಹಳ್ಳಿ, ಚಿಕ್ಕಕಾಡನೂರು, ಸಿ.ಹಿಂದಲಹಳ್ಳಿ, ದಾಳಗೌಡನಹಳ್ಳಿ, ಮೂಡಲಕೊಪ್ಪಲು, ಕಲ್ಲಹಳ್ಳಿ, ಹಳ್ಳಿಮೈಸೂರು ಮಾರ್ಗ ಮತ್ತು ಪಟ್ಟಣದಿಂದ ದೊಡ್ಡಕಾಡನೂರು, ನಗರನಹಳ್ಳಿ ಮಾರ್ಗವಾಗಿ ಗ್ರಾಮೀಣ ಸಾರಿಗೆ ಬಸ್ಸುಗಳೇ ಇಲ್ಲ. ಈ ಭಾಗದ ವಿದ್ಯಾರ್ಥಿಗಳು ಹೋಬಳಿ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಿಗೆ ವ್ಯಾಸಂಗ ಮಾಡಲು ದಿನನಿತ್ಯ ನೂರಾರು ವಿದ್ಯಾರ್ಥಿಗಳು ತೆರಳುತ್ತಿದ್ದು, ಬಸ್ಸುಗಳಿಲ್ಲದೆ ಶಾಲಾ ಕಾಲೇಜುಗಳಿಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಬರುತ್ತಿದ್ದ ಬಸ್ಸುಗಳನ್ನು ನಿಲ್ಲಿಸುತ್ತಿಲ್ಲ. ಬುಧವಾರ ಬೆಳಗ್ಗೆ ೯ ಗಂಟೆ ಆಸುಪಾಸಿನ ಸಮಯದಲ್ಲಿ ಹೊಳೆನರಸೀಪುರಕ್ಕೆ ಬರುತ್ತಿದ್ದ ಬಸ್ ಕೆಎ೧೩ ಎಫ್೧೯೧೩ ನಂಬರ್ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ಕೆಲವೊಮ್ಮೆ ನಿಲ್ಲಿಸದೇ ಹೋಗಿರುತ್ತಾರೆ.

ಅಪರೂಪಕೊಮ್ಮೆ ಗ್ರಾಮೀಣ ಬಸ್ ತಂಗುದಾಣದಲ್ಲಿ ನಿಲ್ಲಿಸುತ್ತಾರೆ. ಚಾಲಕ ಹಾಗೂ ನಿರ್ವಾಹಕ ಏರ್‌ಫೋನ್, ಬ್ಲೂಟೂತ್ ಅಳವಡಿಸಿಕೊಂಡು ಮಾತನಾಡಿಕೊಂಡು ಚಲಿಸುತ್ತಾರೆ. ಬಸ್ ನಿಲ್ಲಿಸದೇ ಏಕೆ ಹೋಗುತ್ತೀರಿ ಎಂದು ಕೇಳಿದರೆ ಅದನ್ನು ಕೇಳಲು ನೀವ್ಯಾರು ನಮ್ಮ ಅಧಿಕಾರಿಗಳೇ ಕೇಳಲ್ಲ, ನಾವು ಮೊಬೈಲ್ ಬಳಸಿದರೆ ನಿಮಗೇನು ತೊಂದರೆ ಎಂದು ದಬ್ಬಾಳಿಕೆ ಮಾಡಿ, ಹೆದರಿಸುತ್ತಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೂರಿದ್ದಾರೆ. ಇವರ ವರ್ತನೆಯಿಂದ ವಿದ್ಯಾರ್ಥಿಗಳಿಗೆ ನಾನಾ ರೀತಿಯ ಸಮಸ್ಯೆಗಳು ಎದುರಾಗಿದೆ. ಅಧಿಕಾರಿಗಳು ಕೂಡಲೇ ಬೇಜವಾಬ್ದಾರಿ ಚಾಲಕ ಮತ್ತು ನಿರ್ವಾಹಕರ ಮೇಲೆ ಶಿಸ್ತು ಕ್ರಮ ಜರುಗಿಸಿ ಹಾಗೂ ಸಂಯಮದಿಂದ ವರ್ತಿಸುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಿ ಮತ್ತು ಬಸ್ಸುಗಳನ್ನು ಬಿಡುವುದರ ಮೂಲಕ ಅನುಕೂಲ ಮಾಡಬೇಕೆಂದು ಒತ್ತಾಯಿಸಿದರು.

ಸಹಾಯಕ ಸಂಚಾರ ನಿಯಂತ್ರಣ ಅಧಿಕಾರಿ ಕುಮಾರ್‌ ಮಾತನಾಡಿ, ಚಾಲಕ ಮತ್ತು ನಿರ್ವಾಹಕರಿಗೆ ಈಗಾಗಲೇ ಹಲವು ಸೂಚನೆಗಳನ್ನು ನೀಡಿದ್ದೇವೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಲುಗಡೆ ಇರುವ ಪ್ರದೇಶಗಳಲ್ಲಿ ಬಸ್ ನಿಲ್ಲಿಸಿಕೊಂಡು ಬರಬೇಕು. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಬಾರದು ಎಂದು ವಿಶೇಷ ಸೂಚನೆಗಳನ್ನು ನೀಡಿದ್ದೇವೆ. ಬಸ್ಸು ನಿಲ್ಲಿಸದೇ ಅಸಭ್ಯವಾಗಿ ವರ್ತಿಸಿರುವ ಚಾಲಕ ಮತ್ತು ನಿರ್ವಾಹಕರಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದರು. ಮೊಬೈಲ್‌ ಬಳಸದಂತೆ ಸೂಚನೆ ನೀಡಿದ್ದರೂ ಮತ್ತೆ ಮುಂದುವರಿಸಿರುವ ಚಾಲಕ ಮತ್ತು ನಿರ್ವಾಹಕರಿಗೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

PREV