ಜಿಲ್ಲಾಧಿಕಾರಿ ಕಚೇರಿ ಮುಂದೆ ಎಐಎಸ್‌ಎಫ್ ನೇತೃತ್ವದಲ್ಲಿ ಧರಣಿ । ಜಿಲ್ಲಾಡಳಿತಕ್ಕೆ ಮನವಿ
ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಗರ ಸಾರಿಗೆ ಸೌಲಭ್ಯವನ್ನು ದೊರಕಿಸಿಕೊಡಬೇಕು, ಹಾಸನ ವಿಶ್ವವಿದ್ಯಾಲಯದ ಮಾರ್ಗದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಿಗೂ ನಿಲುಗಡೆ ಮಾಡಬೇಕು ಮತ್ತು ಬಸ್ ತಂಗುದಾಣದ ವ್ಯವಸ್ಥೆ ಒದಗಿಸಿ ಕೊಡಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‌ಎಫ್) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಯೂತ್ ಫೆಡರೇಷನ್ ರಾಜ್ಯ ಕಾರ್ಯದರ್ಶಿ ಸಂತೋಷ್ ಮತ್ತು ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ‘ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಹೇಮಗಂಗೋತ್ರಿ ಅಸ್ಥಿತ್ವದಲ್ಲಿದ್ದು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಜಿಲ್ಲೆಯ ಆನೇಕ ಗ್ರಾಮಗಳಿಂದ ಸಂಚರಿಸಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ ಈ ವಿದ್ಯಾರ್ಥಿಗಳಿಗೆ ಅನುಕೂಲವಾದ ಬಸ್ ಸಂಚಾರದ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಪರದಾಡುವಂತೆ ಆಗಿದೆ. ಅದರಲ್ಲೂ ಬೆಳಗಿನ ೯ ರಿಂದ ೧೧ ಗಂಟೆಯವರೆಗೆ ಹಾಗೂ ಮಧ್ಯಾಹ್ನ ೧ ರಿಂದ ೫ ಗಂಟೆಯವರೆಗೆ ಬಸ್‌ಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಬಹಳ ಕಷ್ಟು ಪಡುತ್ತಿದ್ದಾರೆ’ ಎಂದು ದೂರಿದರು.‘ಈ ಹಿನ್ನಲೆಯಲ್ಲಿ ಹಾಸನದ ಸಿಟಿ ಬಸ್ ನಿಲ್ದಾಣದಿಂದ ವಿಶ್ವವಿದ್ಯಾಲಯಕ್ಕೆ ಬೆಳಿಗ್ಗೆ ೯ ರಿಂದ ೫ ಗಂಟೆಯವರೆಗೆ ನಗರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ವಿನಂತಿಸುತ್ತೇವೆ. ಅಲ್ಲದೆ ವಿಶ್ವವಿದ್ಯಾಲಯದ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ನಿಲುಗಡೆ ಕೊಡುವಂತೆ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರುತ್ತೇವೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಕಾರ್ಯದರ್ಶಿ ಭಾಸ್ಕರ್, ಸಹ ಕಾರ್ಯದರ್ಶಿ ವೀರೇಶ್, ಜಿಲ್ಲಾ ಸಂಚಾಲಕರಾದ ಎಚ್.ಎಸ್.ಪುಷ್ಪಲತಾ ಸೇರಿ ಇತರರು ಇದ್ದರು.