ಶ್ರೀಗಳಿಗೆ ವಚನ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳ ಸುರಿಮಳೆ!

KannadaprabhaNewsNetwork |  
Published : Sep 18, 2025, 01:10 AM IST
15ಕೆಡಿವಿಜಿ16, 17, 18-ದಾವಣಗೆರೆ ಎವಿಕೆ ಕಾಲೇಜಿನಲ್ಲಿ ಸೋಮವಾರ ವಚನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಸಾಣೇಹಳ್ಳಿ ಶ್ರೀಗಳು, ತೋಂಟದಾರ್ಯ ಶ್ರೀಗಳು, ಭಾಲ್ಕಿ ಶ್ರೀಗಳು ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಪಂಕ್ತಿ ಪದ್ಧತಿಯಲ್ಲಿ ಇಂದಿಗೂ ತಾರತಮ್ಯ ಇದೆಯಲ್ಲವೇ?, ಹೆಣ್ಣು ಮತ್ತು ಗಂಡು ಎಂಬ ಎರಡೇ ಜಾತಿ ಇರುವುದೆಂದು ಬಸವಣ್ಣನವರು ಹೇಳಿದ್ದರೂ ಜನರು ಜಾತಿ ಜಾತಿ ಎನ್ನುತ್ತಿದ್ದಾರಲ್ಲಾ?, ಸಮಾಜದಲ್ಲಿ ಇಂದಿಗೂ ಮೌಢ್ಯ ಬೇರೂರಿದೆಯಲ್ಲವೇ?

- ಅನೇಕ ಕಡೆ ಪಂಕ್ತಿ ತಾರತಮ್ಯ ಬೇರೂರಿದೆಯಲ್ಲವೇ?, ಸಮಾಜದಲ್ಲಿ ಇಂದಿಗೂ ಮೌಢ್ಯ ಬೇರೂರಿದೆಯಲ್ಲವೇ?! - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಂಕ್ತಿ ಪದ್ಧತಿಯಲ್ಲಿ ಇಂದಿಗೂ ತಾರತಮ್ಯ ಇದೆಯಲ್ಲವೇ?, ಹೆಣ್ಣು ಮತ್ತು ಗಂಡು ಎಂಬ ಎರಡೇ ಜಾತಿ ಇರುವುದೆಂದು ಬಸವಣ್ಣನವರು ಹೇಳಿದ್ದರೂ ಜನರು ಜಾತಿ ಜಾತಿ ಎನ್ನುತ್ತಿದ್ದಾರಲ್ಲಾ?, ಸಮಾಜದಲ್ಲಿ ಇಂದಿಗೂ ಮೌಢ್ಯ ಬೇರೂರಿದೆಯಲ್ಲವೇ?

ಹೀಗೆ ಹತ್ತು ಹಲವಾರು ಪ್ರಶ್ನೆಗಳು ವಿವಿಧ ಮಠಾಧೀಶರಿಗೆ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಕೇಳಿಬಂದರೆ, ಆ ಎಲ್ಲಾ ಪ್ರಶ್ನೆಗಳಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ಮಠಾಧೀಶರು ಸಮರ್ಪಕವಾಗಿ ವಿವರಿಸಿ, ಮಕ್ಕಳ ಪ್ರಶ್ನೆಗೆ ಸಮಾಧಾನದ ಉತ್ತರ ನೀಡುವ ಪ್ರಯತ್ನ ಮಾಡಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಚನ ಸಂವಾದ ಕಾರ್ಯಕ್ರಮದಲ್ಲಿ ವಚನ ಸಂವಾದವನ್ನು ಅಭಿಯಾನದ ಅಧ್ಯಕ್ಷ, ಅಪೂರ್ವ ಹೋಟೆಲ್ ಸಮೂಹಗಳ ಅಧ್ಯಕ್ಷ ಅಣಬೇರು ರಾಜಣ್ಣ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿನಿ ಸುಕನ್ಯಾ ಅವರಿಂದ, ಇಂದಿಗೂ ಊಟದ ಪದ್ಧತಿ, ಪಂಕ್ತಿ ಪದ್ಧತಿಯಲ್ಲಿ ತಾರತಮ್ಯ ಇದೆಯೆಲ್ಲವೇ ಎಂಬ ಪ್ರಶ್ನೆ ತೇಲಿ ಬಂದಿತು. ಅದಕ್ಕೆ ಸ್ವಾಮೀಜಿ, ದಾಸೋಹ, ಕಾಯಕ, ಅನುಭವ ಮಂಟಪವೆಂಬ ಮೂರು ತತ್ವಗಳನ್ನು ಬಸವಣ್ಣ ಪ್ರತಿಪಾತಿಸಿದರು. ದಾಸೋಹ ತತ್ವದ ಮೂಲಕ ಸಮಾನತೆಯನ್ನು ಸಾರಿದ್ದರು. ತಾರತಮ್ಯ ಹೋಗಲಾಡಿಸಲೆಂದೇ ಅಭಿಯಾನ ನಡೆಸಿದ್ದೇವೆ ಎಂದರು.

ಮತ್ತೋರ್ವ ವಿದ್ಯಾರ್ಥಿನಿ ಶಶಿಕಲಾ, ಇಂದಿಗೂ ಸಮಾಜದಲ್ಲಿ ಮೌಢ್ಯವಿದೆಯೆಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ಸ್ವಾಮೀಜಿ ಮಾತನಾಡಿ, ಪ್ರೀತಿ, ವಿಶ್ವಾಸದಿಂದ ಮೌಢ್ಯ ಅಳಿಸಬೇಕು. ವಚನ ಸಾಹಿತ್ಯ ಅಧ್ಯಯನ ಹೆಚ್ಚಾದರೆ ಮೌಢ್ಯ ತನ್ನ ಪಾಡಿಗೆ ತಾನೇ ದೂರವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ವಚನ ಸಾಹಿತ್ಯ ಅಧ್ಯಯನಕ್ಕೆ ಮುಂದಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿ ಆಕಾಶ ಮಾತನಾಡಿ, ಗಂಡು-ಹೆಣ್ಣು ಎರಡೇ ಜಾತಿಯೆಂದು ಬಸವಣ್ಣ ಹೇಳಿದ್ದರು. ಸಮಾಜದಲ್ಲಿ ಜಾತಿ ಜಾತಿಯೆಂದು ಜನ ಹೇಳುತ್ತಾರಲ್ಲವೇ ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಸ್ವಾಮಜಿ ಮಾತನಾಡಿ, ಕೆಲವರು ಅಂದಷ್ಟೇ ಅಲ್ಲ ಇಂದಿಗೂ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಇಂದಿಗೂ ಮಠಗಳಲ್ಲಿ ಅಂತರ್ಜಾತಿ ವಿವಾಹಗಳು ನಡೆಯುತ್ತಿವೆ ಎಂದು ವಿವರಿಸಿದರು.

ವಿದ್ಯಾರ್ಥಿ ಆದಿತ್ಯ ಬಸವಣ್ಣನ ತತ್ವಗಳು ಇಂದು ಪ್ರತಿಫಲಿಸಿವೆಯಾ ಎಂಬ ಪ್ರಶ್ನೆ ಮುಂದಿಟ್ಟರು. ಅದಕ್ಕೆ ಶ್ರೀಗಳು ಸಂವಿಧಾನದಲ್ಲೇ ಬಸವ ತತ್ವಗಳು ಪ್ರತಿಫಲಿಸಿವೆ. ಇನ್ನೂ ಹಲವಾರು ತತ್ವಗಳನ್ನು ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ವಿದ್ಯಾರ್ಥಿನಿ ಗೌತಮಿ, ಬಸವಣ್ಣನವರ ಪರಿಕಲ್ಪನೆಯಲ್ಲಿ ಮಾನವ ಧರ್ಮ ಇದೆಯಾ ಎಂಬ ಪ್ರಶ್ನೆಗೆ ಸ್ವಾಮೀಜಿ, ಬಸವಣ್ಣನವರು ಪ್ರತಿಯೊಬ್ಬರಲ್ಲೂ ಸಮಾನತೆಯನ್ನು ಕಂಡಿದ್ದರು. ಬಸವಪರ ಮಠಗಳಿಂದ ಸಮ ಸಮಾಜ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ವಿದ್ಯಾರ್ಥಿನಿ ಅಂಬಿಕಾ, ಶರಣರ ದೃಷ್ಟಿಯಲ್ಲಿ ಯಾವುದು ದೇವರು ಎಂದು ಪ್ರಶ್ನಿಸಿದರು. ಅದಕ್ಕೆ, ಮಾನವನೇ ದೇವರು, ದೇಹವೇ ದೇಗುಲವೆಂದು ಶ್ರೀಗಳು ವಿಶ್ಲೇಷಿಸಿದರು.

ಕಾಲೇಜು ಪ್ರಾಚಾರ್ಯರಾದ ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದೇವರು, ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ, ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕೂಡಲ ಸಂಗಮದ ಬಸವ ಧರ್ಮ ಪೀಠದ ಗಂಗಾ ಮಾತಾಜೀ, ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಅಕ್ಕ ನಾಗಲಾಂಬಿಕಾ ಮಾತಾಜಿ, ಇತರೆ ಮಠಾಧೀಶರು ಸಾನಿಧ್ಯ ವಹಿಸಿದ್ದರು.

- - -

-15ಕೆಡಿವಿಜಿ16, 17, 18:

ದಾವಣಗೆರೆ ಎವಿಕೆ ಕಾಲೇಜಿನಲ್ಲಿ ಸೋಮವಾರ ವಚನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಸಾಣೇಹಳ್ಳಿ ಶ್ರೀಗಳು, ತೋಂಟದಾರ್ಯ ಶ್ರೀಗಳು, ಭಾಲ್ಕಿ ಶ್ರೀಗಳು ವಿವರಿಸುವ ಮೂಲಕ ಉತ್ತರ ನೀಡಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ