ಲಕ್ಷ್ಮೇಶ್ವರ: ಭಾನುವಾರ ಬೆಳಗ್ಗೆ ಪಟ್ಟಣದ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಆರಿಸಿ ಒಂದೆಡೆ ಸಂಗ್ರಹಿಸುವುದರ ಜತೆಗೆ ಪ್ಲಾಸ್ಟಿಕ್ ಬಳಕೆ ಅಪಾಯಕಾರಿ ಎನ್ನುವ ಅರಿವು ಮೂಡಿಸುವ ಕಾರ್ಯವನ್ನು ಪಟ್ಟಣದ ರೆಮಿನೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಮಾಡಿ ಎಲ್ಲರ ಗಮನ ಸೆಳೆಯಿತು.
ಪಟ್ಟಣದ ಬಸ್ ನಿಲ್ದಾಣ ಹಾಗೂ ಸೋಮೇಶ್ವರ ದೇವಸ್ತಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಟ್ಟಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಒಂದೆಡೆ ಕಲೆಹಾಕಿದರು.
ಎಲ್ಲೆಂದರಲ್ಲಿ ಗುಟ್ಕಾ ಚೀಟುಗಳು, ಕುರುಕುರೆ, ನೀರಿನ ಬಾಟಲಿಗಳು ಬಿದ್ದಿರುವುದನ್ನು ಪಟಪಟನೆ ವಿದ್ಯಾರ್ಥಿಗಳು ಅವುಗಳನ್ನು ತೆಗೆದು ಹಾಕಿದ ಸ್ವಚ್ಛಗೊಳಿಸಿದರು. ಅಲ್ಲದೆ ಕೆಲವೊಂದು ಕಡೆ ಕುಡಿದು ಎಸೆದ ನೀರಿನ ಬಾಟಲಿ, ಗುಟ್ಕಾ ಚೀಟುಗಳು ಇತ್ಯಾದಿ ಪ್ಲಾಸ್ಟಿಕ್ ಮೇಲೆ ಎಲೆ ಅಡಕೆ ಗುಟ್ಕಾ ಉಗಿದಿದ್ದು, ಗಲೀಜು ಇದ್ದರೂ ಹಿಂಜರಿಯದೆ ವಿದ್ಯಾರ್ಥಿಗಳು ಅವುಗಳನ್ನು ತೆಗೆದು ಹಾಕಿದರು.ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಅಂಗಡಿಗಳು ಸಾರ್ವಜನಿಕರಿಗೆ ಮನೆಗಳಿಗೆ ತೆರಳಿ ಅಲ್ಲಿನ ಜನರಿಗೂ ಸಹ ದಯವಿಟ್ಟು ಪ್ಲಾಸ್ಟಿಕ್ ಬಳಕೆ ಮಾಡಬೇಡಿ, ಇದರಿಂದ ಪರಿಸರಕ್ಕೆ ಅಪಾಯವಿದೆ ಎನ್ನುವ ಮಾತುಗಳನ್ನು ಹೇಳಿ ಬರುತ್ತಿದ್ದರು. ಸುಮಾರು ಎರಡು ಗಂಟೆಗಳ ಕಾಲ ಮಕ್ಕಳು ಉತ್ಸಾಹದಿಂದ ಈ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದು, ಅಲ್ಲಿ ತಾವು ಸ್ವಚ್ಛಗೊಳಿಸಿದ ಜಾಗವನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯನಿ ಮತ್ತು ಶಿಕ್ಷಕರು ಮಾರ್ಗದರ್ಶನ ಮಾಡಿದರು.
ಶಾಲೆಯ ಅಧ್ಯಕ್ಷ ಚಾರ್ಲ್ಸ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಇದು ಕ್ಯಾನ್ಸರ್‌ನಂತಹ ಭಯಂಕರ ಕಾಯಿಲೆಯನ್ನು ತಂದೊಡ್ಡುತ್ತಿದೆ. ಮಕ್ಕಳಲ್ಲಿ ಅರಿವು ಮೂಡಿಸುವುದರ ಜತೆಗೆ ಸಾರ್ವಜನಿಕವಾಗಿ ಅರಿವು ಮೂಡಿಸುವ ಕಾರ್ಯ ಕೈಗೊಂಡಿದ್ದೇವೆ. ಇದು ಒಂದು ದಿನದ ಪ್ರಚಾರಕ್ಕಾಗಿ ಮಾಡುವ ಕಾರ್ಯವಲ್ಲ, ಪ್ರತಿ ಭಾನುವಾರ ಒಂದೊಂದು ಭಾಗದಲ್ಲಿ ಪ್ಲಾಸ್ಟಿಕ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.ಪ್ಲಾಸ್ಟಿಕ್ ಬಳಕೆ ಮನುಷ್ಯನಿಗೆ ಅರಿವಿಲ್ಲದೇ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಪ್ಲಾಸ್ಟಿಕ್ ಹಾನಿ ಹಾಗೂ ಪರಿಸರ ಸ್ವಚ್ಛತೆ ಕುರಿತು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಂದ ಮನೆಯ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು. ಈ ಬಗ್ಗೆ ಮನೆಯ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲು ಮಕ್ಕಳಿಂದ ಮಾತ್ರ ಸಾಧ್ಯ. ಶಾಲೆಯ ಈ ಕಾರ್ಯ ಶ್ಲಾಘನೀಯ ಎಂದು ವಕೀಲ ವಿ.ಎಸ್. ಪಶುಪತಿಹಾಳ ಅಭಿಪ್ರಾಯಪಟ್ಟರು.