ಹಾನಗಲ್ಲ: ದೂರದೃಷ್ಟಿಯ ಮೂಲಕ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ ಹ್ಯುಮ್ಯಾನಿಟಿ ಫೌಂಡೇಶನ್ ಸಂಸ್ಥೆ ತಾಲೂಕಿನ ಗ್ರಾಮೀಣ ಮಕ್ಕಳ ಉನ್ನತಿಗೆ ಒಳ್ಳೆಯ ಅವಕಾಶ ನೀಡುತ್ತಿರುವುದು ಅಭಿನಂದನೀಯ. ಅಲ್ಲದೇ ಇದು ಮಹಾತ್ವಾಕಾಂಕ್ಷಿ ಕಾರ್ಯ ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಎನ್.ಬಿ. ಬಣಕಾರ ಶ್ಲಾಘಿಸಿದರು.ಇಲ್ಲಿನ ಹ್ಯಮ್ಯಾನಿಟಿ ಫೌಂಡೇಶನ್‌ನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 52 ದಿನಗಳ ಶಾಲಾಪೂರ್ವ ಉಚಿತ ತರಬೇತಿಯ ಸಮಾರೋಪ ನುಡಿಗಳನ್ನಾಡಿದ ಅವರು, ಇದು ಸ್ಪರ್ಧೆಯ ಯುಗ. ಪಟ್ಟಣದ ಮಕ್ಕಳಿಗೆ ಒಂದಿಲ್ಲೊಂದು ಶೈಕ್ಷಣಿಕ ಕಲಿಕೆಯ ವಿಶೇಷ ಅವಕಾಶಗಳಿವೆ.
ಗ್ರಾಮೀಣ ಮಕ್ಕಳಿಗೆ ಇಂತಹ ಅವಕಾಶಗಳು ಅಪರೂಪ. ಶಾಸಕ ಶ್ರೀನಿವಾಸ ಮಾನೆ ಅವರು ಮಕ್ಕಳ ಶೈಕ್ಷಣಿಕ ಹಿತಕ್ಕೆ ಉಪಕರಿಸುತ್ತಿರುವುದು ವಿದ್ಯಾರ್ಥಿಗಳ ಪಾಲಿಗೆ ಇದು ಸುವರ್ಣ ಅವಕಾಶ. ರಜೆಯ ಕಾಲವನ್ನು ಜ್ಞಾನಾರ್ಜನೆಯ ಮೂಲಕ ಅರ್ಥಪೂರ್ಣಗೊಳಿಸಿರುವುದು ನಿಜಕ್ಕೂ ಮೆಚ್ಚುವಂತಹದ್ದು. ಉಚಿತವಾಗಿ ಶಿಕ್ಷಣ ನೀಡುವುದರ ಮೂಲಕ ಬಡ ಮಕ್ಕಳಿಗೂ ಇದರ ಲಾಭವಾಗಿರುವುದು ಇನ್ನಷ್ಟು ಅಚ್ಚುಮೆಚ್ಚು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ, ಪರಿವರ್ತನ ಕಲಿಕಾ ಕೇಂದ್ರದ ಮೂಲಕ ವರ್ಷವಿಡೀ ಶೈಕ್ಷಣಿಕ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ತಾಲೂಕು ಮಾತ್ರವಲ್ಲ ಪಕ್ಕದ ತಾಲೂಕು ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.ಸಂಪನ್ಮೂಲ ಶಿಕ್ಷಕರಾದ ಪ್ರದೀಪಕುಮಾರ ಹಾಗೂ ಬಸವರಾಜ ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಕೇವಲ ಅಂಕಗಳು ಮುಖ್ಯವಾಗುವುದಿಲ್ಲ. ಸಾಮಾಜಿಕ ರಾಷ್ಟ್ರೀಯ ವಿಚಾರ ಧಾರೆಗಳು, ಮೌಲಿಕ ಜೀವನ ದರ್ಶನಗಳು ಬೇಕಾಗುತ್ತವೆ. ಸಾರ್ಥಕ ಜೀವನಕ್ಕೆ ಪರಿಶ್ರಮವೂ ಬೇಕು ಎಂದರು.ತರಬೇತಿ ಪಡೆದ ವಿದ್ಯಾರ್ಥಿಗಳಾದ ಜ್ಯೋತಿ ಯಲ್ಲಾಪೂರ, ಕವನ ಆಡೂರು, ಮಾಲತೇಶ ಕುರುಬರ ಮಾತನಾಡಿ, ಶಾಸಕ ಶ್ರೀನಿವಾಸ ಮಾನೆ ಅವರು ಶಾಲಾ ಪೂರ್ವ ತರಬೇತಿಗೆ ಅವಕಾಶ ಮಾಡಿಕೊಡುವ ಮೂಲಕ ನಮಗೆ ಒಳ್ಳೆಯ ಶೈಕ್ಷಣಿಕ ದೃಷ್ಟಿ, ಅಧ್ಯಯನದ ಅವಕಾಶ ನೀಡಿದ್ದಾರೆ. ಅವರ ಉಪಕಾರವನ್ನು ಸದಾ ಸ್ಮರಿಸುತ್ತೇವೆ ಎಂದರು. ಗಿರೀಶ ಅಂಬಿಗೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನಹಾವೇರಿ: ದೇವಗಿರಿ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿಯಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಜೂ. 10ರಿಂದ ಜು. 10ರ ವರೆಗೆ 30 ದಿನಗಳ ಉಚಿತ ಮೊಬೈಲ್ ರಿಪೇರಿ ಮತ್ತು ಸರ್ವಿಸ್ ತರಬೇತಿ ಆಯೋಜಿಸಲಾಗಿದೆ.
ಜಿಲ್ಲೆಯ 18ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಈ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿ, ಡಿಸಿ ಆಫೀಸ್ ಕಟ್ಟಡದ ಹಿಂಭಾಗ, ದೇವಗಿರಿ- ಹಾವೇರಿ ಮೊ. 8660219375 ಹಾಗೂ 9611645907 ಸಂಪರ್ಕಿಸಲು ಕೋರಲಾಗಿದೆ.