ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು: ನಟ ದೊಡ್ಡಣ್ಣ

KannadaprabhaNewsNetwork | Published : Jul 27, 2024 12:54 AM

ಸಾರಾಂಶ

ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವೇದಿಕೆ, ಎನ್.ಎಸ್.ಎಸ್. ಸೇವಾ ಘಟಕಗಳನ್ನು ಚಲನಚಿತ್ರ ನಟ ದೊಡ್ಡಣ್ಣ ಉದ್ಘಾಟಿಸಿದರು.

ಕನ್ನಡಪ್ರ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿ ಜೀವನ ಮೌಲ್ಯಯುತವಾದದ್ದು, ಈ ಹಂತದಲ್ಲಿ ಯಾರೂ ದಾರಿ ತಪ್ಪಬೇಡಿ, ಅಧ್ಯಯನ ಶೀಲರಾಗಿ, ತಂದೆತಾಯಿಗಳನ್ನು ಗೌರವಿಸಿ ಎಂದು ಚಲನಚಿತ್ರ ನಟ ದೊಡ್ಡಣ್ಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶುಕ್ರವಾರ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವೇದಿಕೆ, ಎನ್.ಎಸ್.ಎಸ್. ಸೇವಾ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ. ವಿದ್ಯಾರ್ಥಿಗಳು ಅಧ್ಯಯನ ಶೀಲರಾಗಬೇಕು. ಯಾರ ಮನಸ್ಸನ್ನು ನೋಯಿಸ ಬಾರದು, ತಂದೆ ತಾಯಿಗಳಿಗೆ, ಗುರು ಹಿರಿಯರಿಗೆ ಗೌರವ ಕೊಡಬೇಕು. ತಾಯಿಯೇ ಮೊದಲ ಗುರು, ಕೋಟಿ ದೇವರನ್ನು ಪೂಜಿಸಿ ತಾಯಿಯನ್ನು ಕಡೆಗಣಿಸಿದರೆ ಏನು ಪ್ರಯೋಜನವಿಲ್ಲ. ಹಾಗೆಯೇ ತಂದೆ ಕೂಡ ನಂತರ ಸ್ಥಾನ ಗುರುವಿನದು, ಗುರು ಕೂಡ ಅತ್ಯುತ್ತಮ ಸ್ಥಾನದಲ್ಲಿದ್ದಾನೆ. ಒಂದಕ್ಷರ ಕಲಿಸಿದವನು ಕೂಡ ಗುರು ಆತ ಜ್ಞಾನದಾತ ಎಂದರು.

ಕನ್ನಡ ಭಾಷೆಗೆ ಆದ್ಯತೆ ಕೊಡಿ ಜಗತ್ತಿನ ಮೂರು ಪ್ರಮುಖ ಭಾಷೆಗಳಲ್ಲಿ ಕನ್ನಡವು ಒಂದು. ಕನ್ನಡ ಭಾಷೆಗೆ ವಿಶಿಷ್ಟವಾದ ಲಕ್ಷಣಗಳಿವೆ. ಮಾತನಾಡಿದಂತೆ ಬರೆಯ ಬಹುದು, ಬರೆದಂತೆ ಮಾತನಾಡಬಹುದು. ಲಿಪಿಗಳ ರಾಣಿ ಕನ್ನಡ. ಕನ್ನಡಕ್ಕೆ ಆದ್ಯತೆ ಕೊಡಿ, ಕೆಟ್ಟ ಪದಗಳಿಂದ ಕನ್ನಡಕ್ಕೆ ಕೆಟ್ಟ ಹೆಸರು ತರಬೇಡಿ, ಕನ್ನಡಕ್ಕಾಗಿ ದುಡಿದವರನ್ನು ಸ್ಮರಿಸಿಕೊಳ್ಳಿ. ನಮ್ಮ ಹಳ್ಳಿಗರು ಕನ್ನಡವನ್ನು ಉಳಿಸಿದ್ದಾರೆ. ಕನ್ನಡ ಭಾಷೆಯನ್ನು ವಿಜೃಂಭಿಸಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಿಗೆ ಸಾಧನೆಗೈದ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಅಧ್ಯಾಪಕರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪ್ರಾಂಶುಪಾಲ ಎಸ್. ಚನ್ನಪ್ಪ, ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್ ನಾಗರಾಜ್, ಹೈಕೋರ್ಟ್ ನ್ಯಾಯಾಧೀಶರಾದ ಮಾನ್ಯ ಸುಮಾ ಸಂದೀಪ್, ಡಾ.ಸಂತೋಷ್, ಪಿ.ಶರತ್, ಉಷಾದೇವಿ, ಎಸ್.ರವಿ , ಚೈತ್ರಾ ಮತ್ತಿತರರು ಇದ್ದರು.

Share this article