ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನಾತ್ಮಕ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ಪಾತ್ರ ಇವೆಲ್ಲವನ್ನೂ ಭವಿಷ್ಯದ ಪೀಳಿಗೆ ಅರಿತುಕೊಳ್ಳಬೇಕು ಎಂಬ ದೃಷ್ಟಿಯಿಂದ ಈ ಯುವ ಸಂಸತ್ತು ಸಭೆಯನ್ನು ಆಯೋಜಿಸಲಾಗಿದೆ. 12ನೇ ಶತಮಾನದಲ್ಲೇ ಬಸವಣ್ಣನವರು ಸರ್ವ ಸಮಾಜಗಳಿಗೂ ಮತ್ತು ಶ್ರಮಿಕರಿಗೂ ಸಮಾನವಾದ ಹಕ್ಕು, ಗೌರವ ಹಾಗೂ ಮಾನ್ಯತೆಯನ್ನು ಕಲ್ಪಿಸಿಕೊಡುವ ಮೂಲಕ ಸಮಾನತೆಯ ಕ್ರಾಂತಿಗೆ ನಾಂದಿ ಹಾಡಿದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಶಾಲಾ ಹಂತದಿಂದಲೇ ವಿದ್ಯಾರ್ಥಿಗಳು ಪೌರ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ದೇಶದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಧೈರ್ಯವಾಗಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಜಿಲ್ಲಾ ಕನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ತು ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನಾತ್ಮಕ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ಪಾತ್ರ ಇವೆಲ್ಲವನ್ನೂ ಭವಿಷ್ಯದ ಪೀಳಿಗೆ ಅರಿತುಕೊಳ್ಳಬೇಕು ಎಂಬ ದೃಷ್ಟಿಯಿಂದ ಈ ಯುವ ಸಂಸತ್ತು ಸಭೆಯನ್ನು ಆಯೋಜಿಸಲಾಗಿದೆ. 12ನೇ ಶತಮಾನದಲ್ಲೇ ಬಸವಣ್ಣನವರು ಸರ್ವ ಸಮಾಜಗಳಿಗೂ ಮತ್ತು ಶ್ರಮಿಕರಿಗೂ ಸಮಾನವಾದ ಹಕ್ಕು, ಗೌರವ ಹಾಗೂ ಮಾನ್ಯತೆಯನ್ನು ಕಲ್ಪಿಸಿಕೊಡುವ ಮೂಲಕ ಸಮಾನತೆಯ ಕ್ರಾಂತಿಗೆ ನಾಂದಿ ಹಾಡಿದ್ದರು ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯೇ ಮೈಸೂರಿನಲ್ಲಿ ರಾಜಪ್ರಭುತ್ವದ ಜೊತೆಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಪ್ರಜಾಪ್ರಭುತ್ವದ ಬೇರನ್ನು ಇಡೀ ಭಾರತದಲ್ಲಿ ಮೊದಲು ನೆಟ್ಟ ನೆಲ ಮೈಸೂರು. ಜಗತ್ತಿನ ಅತ್ಯಂತ ಎತ್ತರದ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸಂವಿಧಾನವನ್ನು ರಚಿಸುವಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಶ್ರಮ ಅಪಾರ ಎಂದು ಸ್ಮರಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಮೇಯರ್ ಪುರುಷೋತ್ತಮ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಾಗರಾಜ ಸಿದ್ದಪ್ಪ ಅಂಕಸದೊಡ್ಡಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ. ಉದಯ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಎಚ್.ಎಸ್. ಬಿಂದ್ಯಾ, ಸಾಮಾಜಿಕ ಹೋರಾಟಗಾರರಾದ ಅಹಿಂದ ಜವರಪ್ಪ, ಸೋಮಯ್ಯ ಮಲೆಯೂರು ಮೊದಲಾದವರು ಇದ್ದರು.
ಹಕ್ಕುಗಳನ್ನು ಚಲಾಯಿಸುವ ಮುನ್ನ ಪ್ರತಿಯೊಬ್ಬರೂ ಕರ್ತವ್ಯವನ್ನು ಪಾಲಿಸಬೇಕು. ಕರ್ತವ್ಯವನ್ನು ನಿರ್ವಹಿಸಿದರೆ ಹಣ, ಅಧಿಕಾರ ಹಾಗೂ ಸಮಾಜದಲ್ಲಿ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದಲೇ ನಾವೆಲ್ಲರೂ ಈ ಮಟ್ಟದಲ್ಲಿದ್ದೇವೆ. ಸಂವಿಧಾನದ ಆಶಯಗಳಂತೆ ಸಮಾಜವನ್ನು ಮುನ್ನಡೆಸಬೇಕು.
- ಸಿ.ಎನ್. ಮಂಜೇಗೌಡ, ವಿಧಾನಪರಿಷತ್ ಸದಸ್ಯರುಇತ್ತೀಚಿನ ಕಾಲಘಟ್ಟದಲ್ಲಿ ಕೇವಲ ನಾಟಕೀಯವಾಗಿರದೇ ಪ್ರಜಾಪ್ರಭುತ್ವ ರಾಷ್ಟ್ರವನ್ನು ಉಳಿಸಲು ಎಲ್ಲರೂ ದೃಢಸಂಕಲ್ಪ ಮಾಡಬೇಕು. ಇವತ್ತಿನ ರಾಜಕಾರಣ, ಹೋರಾಟ ಹಾಗೂ ಕಾನೂನುಗಳು ಭಾರತ ಸಂವಿಧಾನಕ್ಕೆ ಪೂರಕವಾಗಿಲ್ಲ ಎನ್ನುವುದು ತಮ್ಮ ವೈಯಕ್ತಿಕ ಅಭಿಪ್ರಾಯ. ದೇಶದ ಬಹುಸಂಖ್ಯಾತ ಜನರಿಗೆ ಮತ್ತು ಬಡವರಿಗೆ ಸೂಕ್ತ ಆಡಳಿತ ಹಾಗೂ ಪರಿಹಾರ ಸಿಗಬೇಕಾದರೆ, ಯುವಕರು ರಾಜಕಾರಣ ಮತ್ತು ಪತ್ರಿಕಾ ರಂಗವನ್ನು ಪ್ರವೇಶಿಸಿ ಕಾನೂನಿನ ಉನ್ನತ ಸ್ಥಾನಗಳನ್ನು ಗಳಿಸುವ ಕೆಲಸ ಮಾಡಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.