ಮೂಡಿಗೆರೆ ಗೌಡಳ್ಳಿ ಸರ್ಕಾರಿ ಶಾಲೆಯಲ್ಲಿ ಕನ್ನಡಪ್ರಭ ದಿನಪತ್ರಿಕೆಯ ‘ವಿದ್ಯಾರ್ಥಿ ಮಿತ್ರ’ ವಿದ್ಯಾರ್ಥಿ ಆವೃತ್ತಿ ಬಿಡುಗಡೆ
ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ದಾನಿ ಬಿ.ಕೆ. ಲಕ್ಷ್ಮಣ್ ಕುಮಾರ್ ಸಲಹೆ ನೀಡಿದರು.ಮೂಡಿಗೆರೆ ತಾಲೂಕಿನ ಗೌಡಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಕನ್ನಡಪ್ರಭ ದಿನಪತ್ರಿಕೆಯ ‘ವಿದ್ಯಾರ್ಥಿ ಮಿತ್ರ’ ವಿದ್ಯಾರ್ಥಿ ಆವೃತ್ತಿ ಬಿಡುಗಡೆ ಸಮಾರಂಭವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಮಿತ್ರದಲ್ಲಿ ಪರೀಕ್ಷೆಗೆ ಅಗತ್ಯ ಮಾಹಿತಿ, ಸಾಮಾನ್ಯ ಜ್ಞಾನ, ಸಾಮಾಜಿಕ ಅರಿವು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ವಿಷಯ ಪ್ರಕಟವಾಗುತ್ತವೆ. ಅವುಗಳ ಸದ್ಬಳಕೆ ಮಾಡಿಕೊಂಡು ಉತ್ತಮ ಅಂಕ ಗಳೊಂದಿಗೆ ಶಾಲೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ದಾನಿಗಳಾದ ಬಿ.ಕೆ. ಲಕ್ಷ್ಮಣ್ ಕುಮಾರ್ ತಮ್ಮ ಸ್ವಂತ ವೆಚ್ಚದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅವಧಿಗೆ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ಉಚಿತವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.ಹಿರಿಯ ಪತ್ರಕರ್ತ ಪ್ರಸನ್ನ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸುವುದು ಅತ್ಯಗತ್ಯ ಎಂದರು.ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಆದರೆ ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ವೃದ್ಧಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಮಾಹಿತಿ, ಮಾದರಿ ಪ್ರಶ್ನೆ ಪತ್ರಿಕೆಗಳು, ಕ್ರೀಡಾ ಸುದ್ದಿ ಹಾಗೂ ವಿವಿಧ ಶಿಕ್ಷಣ ಸಂಬಂಧಿತ ಮಾಹಿತಿ ದೊರೆಯುತ್ತವೆ ಎಂದು ತಿಳಿಸಿದರು.
"ವಿದ್ಯಾರ್ಥಿಗಳು ತಮ್ಮ ಓದಿನ ಕಡೆ ಹೆಚ್ಚಿನ ಗಮನಹರಿಸಿ, ಉತ್ತಮ ಅಂಕ ಗಳಿಸಿ ಶಾಲೆ, ಗ್ರಾಮ ಹಾಗೂ ಪೋಷಕರಿಗೆ ಕೀರ್ತಿ ತರಬೇಕು. ಮುಂದೆ ಉನ್ನತ ಹುದ್ದೆ ಅಲಂಕರಿಸಿದ ನಂತರ ತಾವು ಕಲಿತ ಶಾಲೆಯನ್ನು ಮರೆಯದೆ ತಮ್ಮ ದುಡಿಮೆ ಒಂದು ಭಾಗವನ್ನು ಶಾಲೆ ಹಾಗೂ ಊರಿನ ಶೈಕ್ಷಣಿಕ ಪ್ರಗತಿಗೆ ಮೀಸಲಿಡಬೇಕು. ಸಮಾಜಕ್ಕೆ ಮರಳಿ ಕೊಡುವ ಮನೋ ಭಾವ ಜೀವನದ ನಿಜವಾದ ಸಾರ್ಥಕತೆ ಎಂದು ಕರೆ ನೀಡಿದರು.
ದಾನಿ ಬಿ.ಕೆ. ಲಕ್ಷ್ಮಣ್ ಕುಮಾರ್ ಅವರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ಪತ್ರಿಕೆ ವಿತರಣೆ ಮಾಡಲಾಗುವುದು.ಅಧ್ಯಕ್ಷತೆಯನ್ನು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ವಹಿಸಿದ್ದರು. ರೈತ ಹಿತರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ಕೆ. ಲಕ್ಷ್ಮಣ್ ಗೌಡ, ಕನ್ನಡಪ್ರಭ ವರದಿಗಾರ ಪ್ರದೀಪ್ ಕುಮಾರ್ ಎನ್., ಶಿಕ್ಷಕರಾದ ರೇಣುಕಮ್ಮ ಕೆ., ಗೀತಾ ಟಿ.ಜಿ., ನಾಜಿಮಾ, ಚಂದ್ರೇಶ್ ಎಚ್.ಪಿ., ಸುಪ್ರಿತ್, ರಂಜಿತ್ ಸೇರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.